ಶಾರ್ಜಾ: ಭಾಗಶಃ ಪ್ಲೇ ಆಫ್‌ನಿಂದ ಹೊರಬಿದ್ದಿರುವ ಸನ್ರೈಸರ್ಸ್ ಹೈದಾರಾಬಾದ್, ಲೀಗ್ನಲ್ಲಿ ತಮ್ಮಷ್ಟೇ ಸಮಸ್ಯೆಗೀಡಾಗಿ 7ನೇ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ವಿರುದ್ಧ ಶನಿವಾರ ನಡೆಯಲಿರುವ 2ನೇ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದೆ.
ಪಂಜಾಬ್ ಕಿಂಗ್ಸ್ ತಂಡ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿಯೂ ಕೊನೆಯ ಓವರ್ನಲ್ಲಿ ಒತ್ತಡಕ್ಕೆ ಸಿಲುಕಿ ಬಹುಪಾಲು ಪಂದ್ಯಗಳನ್ನು ಕಳೆದುಕೊಂಡಿದೆ. ಆಡಿರುವ 9 ಪಂದ್ಯಗಳಲ್ಲಿ 3 ಗೆಲುವು ಮತ್ತು 6 ಸೋಲು ಕಂಡಿರುವ ಪಂಜಾಬ್ ಪ್ಲೇ ಆಫ್ ತಲುಪಲು ಇದು ಕೊನೆಯ ಅವಕಾಶ. ಈ ಪಂದ್ಯವನ್ನು ಸೋತರೆ ಉಳಿದೆಲ್ಲಾ ಪಂದ್ಯಗಳನ್ನು ಗೆದ್ದರೂ ಯಾವುದೇ ಪ್ರಯೋಜನವಿಲ್ಲದಂತಾಗಲಿದೆ.
ಅಲ್ಲದೆ ತನ್ನ ಯುಎಇಯ ಮೊದಲ ಪಂದ್ಯದಲ್ಲಿ ರಾಯಲ್ಸ್ ವಿರುದ್ಧ ಗೆಲ್ಲುವ ಪಂದ್ಯವನ್ನು ಕಳೆದುಕೊಂಡಿದ್ದ ಪಂಜಾಬ್ ತನ್ನ ಆಟಗಾರರ ಆಯ್ಕೆಯಲ್ಲಿ ಟೀಕೆಗೆ ಗುರಿಯಾಗಿತ್ತು. ಸ್ಫೋಟಕ ದಾಂಡಿಗ ಕ್ರಿಸ್ ಗೇಲ್ ಮತ್ತು ಸ್ಪಿನ್ನರ್ ರವಿ ಬಿಷ್ಣೋಯ್ ಅವರನ್ನು ಆಡಿಸದಿದ್ದಕ್ಕೆ ಟೀಕೆಗೆ ಗುರಿಯಾಗಿತ್ತು. ಕೊನೆಯ 18 ಎಸೆತಗಳಲ್ಲಿ 18 ರನ್ಗಳಿಸಲಾಗದೇ 2 ರನ್‌ಗಳಿಂದ ಸೋಲನುಭವಿಸಿತ್ತು.
ಇನ್ನು, 8 ಪಂದ್ಯಗಳಿಂದ ಕೇವಲ ಒಂದು ಗೆಲುವು ಕಂಡಿರುವ ಸನ್ರೈಸರ್ಸ್ ಹೈದರಾಬಾದ್ ಉಳಿದ 6 ಪಂದ್ಯಗಳನ್ನು ಗೆದ್ದರೂ ಪ್ಲೇ ಆಫ್ ಕನಸು ಬೇರೆ ತಂಡಗಳ ಗೆಲುವು ಸೋಲಿನ ಲೆಕ್ಕಾಚಾರದ ಮೇಲೆ ಅವಲಂಭಿತವಾಗಿರುತ್ತದೆ.
ಹಾಗಾಗಿ, ವಿಲಿಯಮ್ಸನ್ ತಂಡ ಕೇವಲ ಗೌರವಕ್ಕಾಗಿ ಈ ಪಂದ್ಯಗಳನ್ನು ಆಡಬೇಕಾಗಿದೆ. ಈ ಪಂದ್ಯವನ್ನು ಹೈದರಾಬಾದ್ ಸೋತರೆ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ. ಈ ಮೂಲಕ ಐಪಿಎಲ್ನಲ್ಲಿ 2013ರ ಬಳಿಕ ಮೊದಲ ಬಾರಿಗೆ ಪ್ಲೇ ಆಫ್ ತಲುಪುವಲ್ಲಿ ಎಸ್ಆರ್ಹೆಚ್ ವಿಫಲವಾಗಲಿದೆ.