ನಯಾಗಡ್(ಒಡಿಶಾ): ಹೋರಾಟವಿಲ್ಲದೆ ಯಶಸ್ಸು ಅಸಾಧ್ಯ. ಕಠಿಣ ಪರಿಶ್ರಮ ಮನುಷ್ಯನಿಗೆ ಮುಂದೊಂದು ದಿನ ಯಶಸ್ಸನ್ನು ತಂದುಕೊಡುತ್ತದೆ. ಮನೋಬಲ ದೃಢವಾಗಿದ್ದರೆ ಯಾವುದೇ ಕೆಸಲವಾದರೂ ಅಸಾಧ್ಯವಲ್ಲ ಎನ್ನುವುದಕ್ಕೆ ಒಡಿಶಾದ ನಯಾಗಡ್ ಜಿಲ್ಲೆಯ ಮಾದಾಪುರ ಗ್ರಾಮದ ಪ್ರಶಾಂತ್ ರಾಣಾ ಸಾಕ್ಷಿಯಾಗಿದ್ದಾರೆ.
ಈತನ ಯಶಸ್ವಿ ಕಥೆ ಸಾವಿರಾರು ಯುವಕರಿಗೆ ಮಾದರಿಯಾಗಿದೆ. ಕ್ರಿಕೆಟ್ ಆಡಲು ತೆರಳಿದರೆ ಥಳಿಸುತ್ತಿದ್ದ ಅವರ ತಂದೆಯೇ ಇಂದು ಮೈದಾನದ ಹೊರಗೆ ನಿಂದು ಚೆಪ್ಪಾಳೆ ತಟ್ಟುತ್ತಾ ಹುರಿದುಂಬಿಸುತ್ತಿದ್ದಾರೆ.
ಒಡಿಶಾದ ಪ್ರಶಾಂತ್ ರಾಣಾ 9 ವರ್ಷಗಳ ಕಾಲ ಪ್ಲಂಬರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಇದೇ ತಿಂಗಳಿಂದ ಆರಂಭವಾಗಲಿರುವ ರಣಜಿ ಟ್ರೋಫಿಯಲ್ಲಿ ವೇಗದ ಬೌಲರ್ ಆಗಿ ತಮ್ಮ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ತನ್ನ ಹಳ್ಳಿಯ ರಸ್ತೆ, ಪುಟ್ಟ ಮೈದಾನದಲ್ಲಿ ಟೆನಿಸ್ ಚೆಂಡಿನಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕ ಶೀಘ್ರದಲ್ಲೇ ಸ್ಟೇಡಿಯಂನಲ್ಲಿ ವಿಜೃಂಬಿಸಲಿದ್ದಾರೆ.
ಮಗನನ್ನ ಗದರಿಸುತ್ತಿದ್ದ ತಂದೆ: ಪ್ರಶಾಂತ್ ನಯಾಗಡ್ ಜಿಲ್ಲೆಯ ಮಾದಪುರ್ ಗ್ರಾಮದಲ್ಲಿ ತಮ್ಮ ತಂದೆ ಮತ್ತು ತಾಯಿಯೊಡನೆ ಚಿಕ್ಕ ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ಬಡತನದ ಬೇಗೆಯಲ್ಲೇ ಬೆಳೆದ ಪ್ರಶಾಂತ್ ಶಾಲೆಗೆ ಹೋಗುತ್ತಿದ್ದಾಗ ಕ್ರಿಕೆಟ್ ಆಡುತ್ತಿದ್ದರು. ಆದರೆ, ಓದುವುದನ್ನು ಬಿಟ್ಟು ಕ್ರಿಕೆಟ್ ಆಡುವುದನ್ನು ಕಂಡ ತಂದೆ ಸನಾತನ ರಾಣಾ ಮಗನನ್ನು ಗದರಿಸುತ್ತಿದ್ದರು. ಕೆಲವು ದಿನಗಳ ನಂತರ ಮನೆಯ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದಿದ್ದರಿಂದ ಪ್ರಶಾಂತ್ ಊರನ್ನು ತ್ಯಜಿಸಿ ಸಿಲ್ವರ್ ಸಿಟಿ ಕಟಕ್ಗೆ ಆಗಮಿಸಿದ್ದರು.
ಯುನಿಯನ್ ಕ್ಲಬ್ನಲ್ಲಿ ಬೌಲಿಂಗ್ ಅಭ್ಯಾಸ :ಮೊದಲು ಕಟಕ್ನಲ್ಲಿ ಪ್ಲಂಬರ್ ಆಗಿ ಕೆಲಸವನ್ನು ಆರಂಭಿಸಿದ್ದರು. ಆದರೆ, ಕ್ರಿಕೆಟಿಗನಾಗುವ ಕನಸನ್ನು ಮಾತ್ರ ಅವರು ಬಿಟ್ಟಿರಲಿಲ್ಲ. ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್, ಅದೇ ಯುನಿಯನ್ ಕ್ಲಬ್ನಲ್ಲಿ ಬೌಲಿಂಗ್ ಕೂಡ ಅಭ್ಯಾಸ ಮಾಡಲಾರಂಭಿಸಿದರು.