ಕೊಲಂಬೊ: ದೀಪಕ್ ಚಾಹರ್ (69) ಭರ್ಜರಿ ಬ್ಯಾಟಿಂಗ್ನಿಂದ ಶ್ರೀಲಂಕಾ ವಿರುದ್ಧ ಭಾರತ ತಂಡ ರೋಚಕ ಜಯ ದಾಖಲಿಸಿದೆ. ಈ ಮೂಲಕ 3 ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 2 ಪಂದ್ಯ ಜಯಿಸಿ ಸರಣಿ ವಶಪಡಿಸಿಕೊಂಡಿದೆ.
ಇಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ 3 ವಿಕೆಟ್ ಅಂತರದಿಂದ ಭಾರತ ತಂಡ ಜಯಭೇರಿ ಸಾಧಿಸಿದೆ. ಭಾರತ 49.1 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 277 ರನ್ ಬಾರಿಸಿ ಜಯದ ಮಾಲೆ ಧರಿಸಿತು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಶ್ರೀಲಂಕಾ 276 ರನ್ ಬಾರಿಸಿ ಸ್ಪರ್ಧಾತ್ಮಕ ಗುರಿ ನೀಡಿತ್ತು. ಬಳಿಕ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾದ ಪೃಥ್ವಿ ಶಾ (13), ಶಿಖರ್ ಧವನ್ (29) ಉತ್ತಮ ಆರಂಭದ ನಿರೀಕ್ಷೆ ಹುಸಿಗೊಳಿಸಿದರು. ತಂಡ 28 ರನ್ ಗಳಿಸುವಷ್ಟರಲ್ಲಿ ಪೃಥ್ವಿ ಶಾ ವಿಕೆಟ್ ಒಪ್ಪಿಸಿದರು. ಬಳಿಕ ಇಶಾಕ್ ಕಿಶನ್ (1) ಬಂದಷ್ಟೇ ವೇಕವಾಗಿ ಪೆವಿಲಿಯನ್ ಸೇರಿಸಿದರು.
ನಂತರ ಜೊತೆಯಾದ ಮನಿಶ್ ಪಾಂಡೆ, ಧವನ್ ಜೋಡಿ ಉತ್ತಮ ರನ್ ಕಲೆ ಹಾಕುವ ಮುನ್ಸೂಚನೆ ನೀಡಿತ್ತು. ಆದ್ರೆ ತಂಡ 65 ರನ್ ಗಳಿಸಿದ್ದಾಗ ಧವನ್ ಔಟಾದರು. 37 ರನ್ ಗಳಿಸಿ ಪಾಂಡೆ ವಿಕೆಟ್ ಒಪ್ಪಿಸಿದರು. ಹಾರ್ದಿಕ್ ಪಾಂಡ್ಯ ಸೊನ್ನೆ ಸುತ್ತಿದರು. ಸೂರ್ಯಕುಮಾರ್ ಯಾದವ್ ಮಧ್ಯಮ ಕ್ರಮಾಂಕದಲ್ಲಿ 53 ರನ್ ಸಿಡಿಸಿ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಲು ಪ್ರಯತ್ನಿಸಿದರು. ಆದ್ರೆ ಎಲ್ಬಿ ಬಲೆಗೆ ಬಿದ್ದು ಹೊರ ನಡೆದರು. (IND vs SL: ದೀಪಕ್ ಚಹರ್ ಅರ್ಧಶತಕ: ರೋಚಕ ತಿರುವು ಪಡೆದ ಎರಡನೇ ಏಕದಿನ ಪಂದ್ಯ)
160 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸೋಲಿನ ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಕೃಣಾಲ್ ಪಾಂಡೆ 35 ರನ್ ಸಿಡಿಸಿ ಭರವಸೆ ಮೂಡಿಸುವಷ್ಟರಲ್ಲಿ ಔಟಾದರು. ಆಗ ತಂಡದ ಮೊತ್ತ 7 ವಿಕೆಟ್ ನಷ್ಟಕ್ಕೆ 193 ರನ್. ಈ ಹಂತದಲ್ಲಿ ಜಯದ ಆಸೆ ಮರೆಯಾಗಿತ್ತು. ಆದ್ರೆ ದೀಪಕ್ ಚಾಹರ್ ಭರ್ಜರಿ 69 ರನ್ ಬಾರಿಸಿ ಗೆಲುವು ತಂದಿತ್ತರು. ಕೊನೆಯ ಹಂತದಲ್ಲಿ ಭುವನೇಶ್ವರ್ ಕುಮಾರ್ (19) ಬ್ಯಾಟಿಂಗ್ ಚಾಹರ್ಗೆ ಸಾಥ್ ನೀಡಿತು. ಈ ಮೂಲಕ ತಂಡ 49.1 ಓವರ್ಗಳಲ್ಲಿ ಗುರಿ ಮುಟ್ಟಿತು.
ಇದಕ್ಕೂ ಮುನ್ನ ಲಂಕಾ ಆರಂಭಿಕ ಬ್ಯಾಟ್ಸ್ಮನ್ ಆವಿಷ್ಕಾ ಫರ್ನಾಂಡೊ ಅವರ ಅರ್ಧಶತಕದ ಬಲದಿಂದ ತಂಡ 276 ರನ್ಗಳ ಸ್ಪರ್ಧಾತ್ಮಕ ಟಾರ್ಗೆಟ್ ದಾಖಲಿಸಿತ್ತು.