ಕೊಲಂಬೊ:ಭಾರತ, ಪಾಕಿಸ್ತಾನದಂತಹ ಬಲಿಷ್ಠ ತಂಡಗಳನ್ನು ಬಗ್ಗುಬಡಿದು ಏಷ್ಯಾ ಕಪ್ ಎತ್ತಿಹಿಡಿದ ಶ್ರೀಲಂಕಾ ತಂಡದ ಆಟಗಾರರಿಗೆ ತಾಯ್ನಾಡಿನಲ್ಲಿ ಅಭೂತಪೂರ್ವ ಸ್ವಾಗತ ದೊರೆತಿದೆ. ತೆರೆದ ವಾಹನದಲ್ಲಿ ನಡೆದ ವಿಜಯೋತ್ಸವದ ಮೆರವಣಿಗೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಅಭಿಮಾನಿಗಳು ಆಟಗಾರರ ಯಶಸ್ಸನ್ನು ಶ್ಲಾಘಿಸಿದರು.
ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಕಟ್ಟಿಹಾಕಿ 6ನೇ ಪ್ರಶಸ್ತಿ ಜಯಿಸಿದ ಶ್ರೀಲಂಕಾದ ಯುವಪಡೆ ದಾಖಲೆ ಬರೆಯಿತು. ಆಟಗಾರರ ಮೆರವಣಿಗೆ ನಡೆಸಿದ ಫೋಟೋಗಳನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಟ್ವಿಟರ್ನಲ್ಲಿ ಹಂಚಿಕೊಂಡಿದೆ. ತೆರೆದ ಡಬಲ್ ಡೆಕ್ಕರ್ ಬಸ್‌ನಲ್ಲಿ ಆಟಗಾರರನ್ನು ಮೆರೆಸಲಾಗಿದೆ. ಅಭಿಮಾನಿಗಳು ಏಷ್ಯಾ ಕಪ್ ದೊರೆಗಳ ಸಾಹಸವನ್ನು ಹೊಗಳಿ ಜೈಕಾರ ಹಾಕಿದರು.
ಅಫ್ಘಾನಿಸ್ತಾನ ವಿರುದ್ಧ ಸೋಲಿನೊಂದಿಗೆ ಏಷ್ಯಾ ಕಪ್ ಅಭಿಯಾನ ಆರಂಭಿಸಿದ್ದ ಶ್ರೀಲಂಕಾ ಟ್ರೋಫಿ ಗೆಲ್ಲುತ್ತದೆ ಎಂಬ ಯಾವ ನಿರೀಕ್ಷೆಯೂ ಇರಲಿಲ್ಲ. ಆರ್ಥಿಕ ಸಂಕಷ್ಟದಿಂದ ನಲುಗಿರುವ ರಾಷ್ಟ್ರದ ಆಟಗಾರರು ಟ್ರೋಫಿ ಗೆಲ್ಲೋದು ಇರಲಿ ಭಾರತ, ಪಾಕಿಸ್ತಾನವನ್ನು ದಾಟಿ ಫೈನಲ್ ತಲುಪುವ ಬಗ್ಗೆಯೂ ಯಾರೂ ಯೋಚಿಸಿರಲಿಕ್ಕಿಲ್ಲ.
ಈ ಎಲ್ಲ ಉಡಾಫೆಗಳನ್ನು ಒಂದೊಂದಾಗಿ ಮೆಟ್ಟಿ ನಿಂತು ಬಂದ ಶ್ರೀಲಂಕಾ ಯುವಪಡೆ ಏಷ್ಯಾ ಮಾತ್ರವಲ್ಲ ವಿಶ್ವ ಕ್ರಿಕೆಟ್ ಅಚ್ಚರಿಪಡುವ ರೀತಿ ಪ್ರದರ್ಶನ ನೀಡಿತು. ಗುಂಪು ಹಂತದಲ್ಲಿ ಬಾಂಗ್ಲಾದೇಶದ ವಿರುದ್ಧ ಜಯಿಸಿ ಸೂಪರ್ 4 ಹಂತಕ್ಕೆ ಬಂದಿತು. ಬಳಿಕ ಸೂಪರ್ ಹಂತದಲ್ಲಿ ಭಾರತ, ತನ್ನನ್ನು ಮೊದಲ ಪಂದ್ಯದಲ್ಲಿ ಸೋಲಿಸಿದ್ದ ಅಫ್ಘಾನಿಸ್ತಾನ, ಪಾಕಿಸ್ತಾನದ ಸವಾಲನ್ನು ಮೆಟ್ಟಿ ನಿಂತಿತು.
ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾದ ಭಾರತವನ್ನು ಸೋಲಿಸಿದ ಮೇಲೆ ತಂಡದ ಆಟಗಾರರ ಆತ್ಮವಿಶ್ವಾಸ ಶಿಖರಪ್ರಾಯವಾಯಿತು. ಫೈನಲ್ ಕದನದಲ್ಲಿ ಪಾಕಿಸ್ತಾನದ ಆಟಗಾರರ ಮೇಲೆ ಎರಗಿದ ಲಂಕನ್ನರು ಗೆಲುವಿನ ಮಹಲು ಕಟ್ಟಿದರು. ಬ್ಯಾಟಿಂಗ್ನಲ್ಲಿ ಮಿಂಚಿದ ಬನುಕಾ ರಾಜಪಕ್ಸೆ 70 ರನ್ ಸಿಡಿಸಿದರೆ, ಬೌಲಿಂಗ್ನಲ್ಲಿ ಸ್ಪಿನ್ನರ್ ಹಸರಂಗ, ಮಹೇಶ್, ತೀಕ್ಷನ, ಮಧುಶಂಕ ಸೇರಿದಂತೆ ತಂಡ ಸಾಂಘಿಕವಾಗಿ ಹೋರಾಡಿ ಏಷ್ಯಾದ ದೊರೆಯಾಗಿ ರಾರಾಜಿಸಿತು.
ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿರುವ ದೇಶಕ್ಕೆ ಆಟಗಾರರ ಟ್ರೋಫಿಯನ್ನು ಅರ್ಪಿಸಿದ್ದಾರೆ. ಇದು ತಂಡಕ್ಕೆ ದೇಶದ ಮೇಲಿರುವ ಕಾಳಜಿ, ಪ್ರೀತಿಯನ್ನು ತೋರಿಸುತ್ತದೆ. ಲಂಕನ್ನರ ಕ್ರಿಕೆಟ್ ಯಶೋಗಾಥೆಯನ್ನು ಯುವಪಡೆ ಮತ್ತೆ ಬರೆಯಲಿ ಎಂಬುದು ಅಭಿಮಾನಿಗಳ ಆಸೆಯಾಗಿದೆ.
ಓದಿ:'ಹರ್ಷಲ್ ಪಟೇಲ್ ಉತ್ತಮ ಬೌಲರ್, ಆದರೆ'.. ಈ ಪ್ಲೇಯರ್ ಇರಬೇಕಾಗಿತ್ತು ಎಂದ ಮಾಜಿ ಕ್ರಿಕೆಟಿಗ