ಗಾಲೆ (ಶ್ರೀಲಂಕಾ): ಶ್ರೀಲಂಕಾದ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಅವರು ಐರ್ಲೆಂಡ್‌ನ ಪಾಲ್ ಸ್ಟಿರ್ಲಿಂಗ್ ಅವರನ್ನು ಔಟ್ ಮಾಡುವ ಮೂಲಕ 71 ವರ್ಷಗಳ ಹಳೆ ದಾಖಲೆಯನ್ನು ಮುರಿದಿದ್ದಾರೆ. ಶುಕ್ರವಾರ ಗಾಲೆಯಲ್ಲಿ ನಡೆದ ಎರಡನೇ ಟೆಸ್ಟ್‌ನ ಅಂತಿಮ ದಿನದಂದು ತಮ್ಮ 50ನೇ ಟೆಸ್ಟ್ ವಿಕೆಟ್ ಪಡೆದರು.
ಶ್ರೀಲಂಕಾದ 31ರ ಹರೆಯದ ಎಡಗೈ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಏಳು ಟೆಸ್ಟ್ ಪಂದ್ಯಗಳ ಕೇವಲ 13 ಇನ್ನಿಂಗ್ಸ್ಗಳಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅತಿ ವೇಗವಾಗಿ 50 ವಿಕೆಟ್ ಪಡೆದ ಸ್ಪಿನ್ ಬೌಲರ್ ಎನಿಸಿಕೊಂಡಿದ್ದಾರೆ. ಈ ದಾಖಲೆಯನ್ನು ಈ ಹಿಂದೆ ವೆಸ್ಟ್ ಇಂಡೀಸ್ ಸ್ಪಿನ್ನರ್ ಆಲ್ಫ್ ವ್ಯಾಲೆಂಟೈನ್ ಹೊಂದಿದ್ದರು, ಅವರು ಈ ಸಾಧನೆ ಮಾಡಲು 8 ಟೆಸ್ಟ್ ಪಂದ್ಯಗಳ 15 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು.
31ರ ಹರೆಯದ ಜಯಸೂರ್ಯ ಅವರು ಜುಲೈ 2022 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಟೆಸ್ಟ್ ಕ್ರಿಕೆಟ್ ಆಡಿದರು. ಚೊಚ್ಚಲ ಪಂದ್ಯದಲ್ಲಿ 177 ರನ್ ಕೊಟ್ಟು 12 ವಿಕೆಟ್ ಪಡೆಯುವ ಮೂಲಕ ನಾಲ್ಕನೇ ಅತ್ಯುತ್ತಮ ಡೆಬ್ಯೂ ಬೌಲಿಂಗ್ ಮಾಡಿದರು. ಜಯಸೂರ್ಯ ಅವರು ಗಾಲೆಯಲ್ಲಿ ನಡೆದ ಎರಡನೇ ಟೆಸ್ಟ್‌ನ ಐರ್ಲೆಂಡ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 5/174 ಸೇರಿದಂತೆ ಆರು ಬಾರಿ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ. ಎರಡು ಬಾರಿ ಪಂದ್ಯವೊಂದರಲ್ಲಿ 10 ವಿಕೆಟ್‌ಗಳನ್ನು ಕಬಳಿಸಿದ ದಾಖಲೆ ಬರೆದಿದ್ದಾರೆ.
ಜಯಸೂರ್ಯ ಅವರಿಗಿಂತ ಮೊದಲು, ವ್ಯಾಲೆಂಟೈನ್ ಅವರು 1950 ರಲ್ಲಿ ತಮ್ಮ ಈ ಸಾಧನೆ ಮಾಡಿದ್ದರು. ತಂಡಕ್ಕೆ ಸೇರಿದ ಕೂಡಲೇ ಪ್ರಭಾವಿ ಬೌಲರ್ ಆಗಿ ಎದುರಾಳಿ ಬ್ಯಾಟರ್ಗಳನ್ನು ಕಾಡಿದ್ದರು. ವೆಸ್ಟ್ ಇಂಡೀಸ್ ಮೊದಲ ಬಾರಿಗೆ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಾಗ, ನಾಲ್ಕು ಟೆಸ್ಟ್‌ಗಳಲ್ಲಿ 33 ವಿಕೆಟ್ ಪಡೆದು ಗೆಲುವಿನ ರುವಾರಿಯಾಗಿದ್ದರು.
ಎಡಗೈ ಆರ್ಥೊಡಾಕ್ಸ್ ಸ್ಪಿನ್ನರ್ 1951/52 ರಲ್ಲಿ ಆಸ್ಟ್ರೇಲಿಯಾದ ವೆಸ್ಟ್ ಇಂಡೀಸ್ ಪ್ರವಾಸದ ನಾಲ್ಕನೇ ಟೆಸ್ಟ್‌ನಲ್ಲಿ ತಮ್ಮ 50ನೇ ವಿಕೆಟ್ ಪಡೆದರು. ಅವರು ತಮ್ಮ ಎಂಟನೇ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಈ ದಾಖಲೆಯನ್ನು 71 ವರ್ಷಗಳಿಗೂ ಹೆಚ್ಚು ಕಾಲ ಯಾರು ಹಿಮ್ಮೆಟ್ಟಿಸಿರಲಿಲ್ಲ. ಶ್ರೀಲಂಕಾದ ಸ್ಪಿನ್ನರ್ ಜಯಸೂರ್ಯ 100 ವಿಕೆಟ್ ಪಡೆದ ಸಾಧನೆಯನ್ನು ಅತಿ ವೇಗವಾಗಿ ಮಾಡಿದಲ್ಲಿ, ಇಂಗ್ಲೆಂಡ್ ವೇಗಿ ಜಾರ್ಜ್ ಲೋಹ್ಮನ್ ಅವ ದಾಖಲೆ ಪುಡಿಯಾಗಲಿದೆ.
ಜಾರ್ಜ್ ಲೋಹ್ಮನ್ ಅವರು 1896 ರಲ್ಲಿ ತಮ್ಮ 16 ನೇ ಟೆಸ್ಟ್‌ನಲ್ಲಿ 100 ನೇ ವಿಕೆಟ್ ಪಡೆದರು. ಆದರೆ ಲೆಗ್ - ಸ್ಪಿನ್ನರ್‌ಗಳಾದ ಆಸ್ಟ್ರೇಲಿಯಾದ ಕ್ಲಾರಿ ಗ್ರಿಮ್ಮೆಟ್ ಮತ್ತು ಪಾಕಿಸ್ತಾನದ ಯಾಸಿರ್ ಶಾ ಅವರು ತಮ್ಮ 17 ನೇ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಜಯಸೂರ್ಯ ಬೌಲಿಂಗ್ ಇದೇ ಫಾರ್ಮ್ನಲ್ಲಿ ಮುಂದುವರಿದರೆ, ಇವರುಗಳ ದಾಖಲೆಯನ್ನು ಹಿಮ್ಮೆಟ್ಟಿಸಲಿದ್ದಾರೆ.
ಇದನ್ನೂ ಓದಿ:ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್: ಪಿವಿ ಸಿಂಧು, ಪ್ರಣಯ್ ಕ್ವಾರ್ಟರ್ಫೈನಲ್ಗೆ