ಭಾರತ ವಿರುದ್ಧದ ಸರಣಿ ಸೋಲಿನ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ನಡೆದ ಮೊದಲ ಏಕದಿನ ಪಂದ್ಯದಲ್ಲೂ ಇಂಗ್ಲೆಂಡ್ ಸೋಲು ಕಂಡಿದೆ. ರಸ್ಸಿ ವ್ಯಾನ್ ಡೆರ್ ಡಸ್ಸೆನ್ ಅದ್ಭುತ ಶತಕ ಮತ್ತು ಐಡೆನ್ ಮಾರ್ಕ್‌ರಮ್ ಅವರ ಅಮೋಘ ಆಲ್ರೌಂಡ್ ಆಟದಿಂದ ದ.ಆಫ್ರಿಕಾ 62 ರನ್ಗಳ ಭರ್ಜರಿ ವಿಜಯ ದಾಖಲಿಸಿತು. ವಿದಾಯದ ಪಂದ್ಯವಾಡಿದ ಬೆನ್ಸ್ಟೋಕ್ಸ್ಗೆ ತಂಡ ಗೆಲುವಿನ ಸಿಹಿ ನೀಡುವಲ್ಲಿ ಸೋತಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 333 ರನ್ ಪೇರಿಸಿತು. ಇದಕ್ಕುತ್ತರವಾಗಿ ಇಂಗ್ಲೆಂಡ್ ಜೋ ರೂಟ್, ಜಾನಿ ಬೈರ್ಸ್ಟೋವ್ರ ಅರ್ಧಶತಕಗಳ ಹೊರತಾಗಿಯೂ 271 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ಡಸ್ಸೆನ್ ಶತಕದ ಸೊಬಗು:ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ 19 ರನ್ ಗಳಿಸಿ ಔಟಾದ ಬಳಿಕ ಕ್ರೀಸ್ಗೆ ಬಂದ ರಸ್ಸಿ ವ್ಯಾನ್ ಡರ್ ಡಸ್ಸೆನ್ (133) ಶತಕ ಬಾರಿಸಿ ಆಟಕ್ಕೆ ಮೆರುಗು ನೀಡಿದರು. ಜನ್ನೆಮನ್ ಮಲನ್ ಮತ್ತು ಡಸ್ಸೆನ್ ಜೋಡಿ 104 ರನ್ಗಳ ಜೊತೆಯಾಟ ನೀಡಿದರು. ಜನ್ನೆಮನ್ ಮಲನ್ 57 ರನ್ ಸಿಡಿಸಿ ಔಟಾದರು.
ಬಳಿಕ ಬಂದ ಐಡೆನ್ ಮಾರ್ಕ್‌ರಮ್(77) ಅರ್ಧಶತಕ ಗಳಿಸಿದರು. ಇನಿಂಗ್ಸ್ನ ಕೊನೆಯಲ್ಲಿ ಮಿಂಚಿದ ಡೇವಿಡ್ ಮಿಲ್ಲರ್ 24 ರನ್ ಬಾರಿಸಿದರು. ಈ ಮೂಲಕ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್‌ಗಳಲ್ಲಿ 333 ರನ್ ಗಳಿಸಿತು.
ಉತ್ತಮ ಆರಂಭ, ನೀರಸ ಪ್ರದರ್ಶನ:ಬೃಹತ್ ಮೊತ್ತ ಬೆಂಬತ್ತಿದ ಇಂಗ್ಲೆಂಡ್ ತಂಡಕ್ಕೆ ಜಾಸನ್ ರಾಯ್ ಮತ್ತು ಜಾನಿ ಬೈರ್‌ಸ್ಟೋವ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ಗೆ 102 ಮಾಡಿದರು. 43 ಗಳಿಸಿದ್ದ ಜಾಸನ್ ರಾಯ್ ಔಟಾದರು. 63 ಗಳಿಸಿ ಆಡುತ್ತಿದ್ದ ಜಾನಿ ಬೈರ್ಸ್ಟೋವ್ಗೆ ಮಾರ್ಕರಮ್ ಪೆವಿಲಿಯನ್ ಹಾದಿ ತೋರಿಸಿದರು.
ಜೋ ರೂಟ್ ಅರ್ಧಶತಕ:ಭಾರತದ ವಿರುದ್ಧದ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದ ಅನುಭವಿ ಆಟಗಾರ ಜೋ ರೂಟ್ 86 ರನ್ ಗಳಿಸಿದರು. ಅವರ ಇನಿಂಗ್ಸ್ನಲ್ಲಿ 5 ಬೌಂಡರಿ 2 ಸಿಕ್ಸರ್ ಇದ್ದವು.
ದಿಢೀರ್ ಕುಸಿತ:ಅಗ್ರ ಕ್ರಮಾಂಕದಲ್ಲಿ ಮಿಂಚಿದ್ದ ಇಂಗ್ಲೆಂಡ್ ಬಳಿಕ ದಿಢೀರ್ ಕುಸಿತ ಕಂಡಿತು. ವಿದಾಯದ ಪಂದ್ಯವಾಡಿದ ಬೆನ್ ಸ್ಟೋಕ್ಸ್ 5 ರನ್ ಗಳಿಸಲಷ್ಟೇ ಶಕ್ತವಾದರೆ, ಜೋಸ್ ಬಟ್ಲರ್ 12, ಲಿವಿಂಗ್‌ಸ್ಟೋನ್ 10, ಮೊಯೀನ್ ಅಲಿ 3 ರನ್ ಗಳಿಸಿ ಔಟಾದರು. ಇದರಿಂದ ತಂಡ 10 ವಿಕೆಟ್ ಕಳೆದುಕೊಂಡು 271 ರನ್ ಗಳಿಸಿ 62 ರನ್ ಅಂತರದ ಸೋಲು ಅನುಭವಿಸಿರು.
ಸ್ಕೋರ್ ವಿವರ:ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 333/5 (ರಸ್ಸಿ ವ್ಯಾನ್ ಡೆರ್ ಡಸ್ಸೆನ್ 133, ಐಡೆನ್ ಮಾರ್ಕ್‌ರಮ್ 77, ಲಿಯಾಮ್ ಲಿವಿಂಗ್‌ಸ್ಟೋನ್ 2-29) ಇಂಗ್ಲೆಂಡ್ 46.5 ಓವರ್‌ಗಳಲ್ಲಿ 271 (ಜೋ ರೂಟ್ 86, ಜಾನಿ ಬೈರ್‌ಸ್ಟೋವ್ 63, ಆನ್ರಿಚ್ ನಾರ್ಟ್ 53-4)
ಇದನ್ನೂ ಓದಿ:ಏಕದಿನ ಪಂದ್ಯದಲ್ಲಿ 333ರನ್ ಗಳಿಸಿದ್ರೂ ಒಂದೇ ಒಂದು ಸಿಕ್ಸರ್ ಸಿಡಿಸದ ದಕ್ಷಿಣ ಆಫ್ರಿಕಾ!