ನವದೆಹಲಿ: ಭಾರತದ ವನಿತೆಯರ ತಂಡ ಸತತ ಉತ್ತಮ ಸಾಧನೆ ಮಾಡುತ್ತಾ ಬರುತ್ತಿದೆ. ಏಷ್ಯಾಕಪ್ 2022 ಚಾಂಪಿಯನ್. ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ರನ್ನರ್ ಅಪ್ ಆಗಿದ್ದ ತಂಡ ಈಗ ಏಷ್ಯನ್ ಗೇಮ್ಸ್ 2023ರಲ್ಲಿ ಚಿನ್ನದ ಪದಕ ಗೆದ್ದು ಚಾಂಪಿಯನ್ ಆಗಿದೆ. 19ನೇ ಆವೃತ್ತಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕವನ್ನು ವನಿತೆಯರು ಗೆದ್ದುಕೊಟ್ಟಿದ್ದಾರೆ.
ಈ ಎಲ್ಲಾ ಪ್ರಮುಖ ಪಂದ್ಯಗಳಲ್ಲಿ ಸ್ಮೃತಿ ಮಂಧಾನ ಉತ್ತಮ ಪ್ರದರ್ಶನ ನೀಡಿದ್ದಾರೆ. ಸ್ಮೃತಿ ಮಂಧಾನ ಅವರನ್ನು ವನಿತೆಯರ ಕ್ರಿಕೆಟ್ ತಂಡದಲ್ಲಿ ವಿರಾಟ್ ಕೊಹ್ಲಿ ಎಂಬಂತೆ ಬಿಂಬಿಸಲಾಗುತ್ತದೆ. ಚೇಸಿಂಗ್ ವೇಳೆ ಉತ್ತಮ ಪ್ರದರ್ಶನ ನೀಡಿರುವುದು ಅವರನ್ನು ಹೀಗೆ ಕರೆಯಲು ಕಾರಣವಾಗಿತ್ತು. ಅಲ್ಲದೇ ಅವರು ತಮ್ಮ ಸೌಂದರ್ಯದಿಂದಲೂ ಅಭಿಮಾನಿಗಳನ್ನು ಪಡೆದಿದ್ದಾರೆ.
ಅಂತಿಮ ಹಂತದ ಪಂದ್ಯಗಳಲ್ಲಿ ಭಾರತಕ್ಕೆ ಯಾವಾಗಲೂ ಮಂಧಾನ ಬೆನ್ನೆಲುಬು ಎಂದು ಪರಿಗಣಿಸಲಾಗಿದೆ. ಅವರು ದೊಡ್ಡ ಸಂದರ್ಭಗಳಲ್ಲಿ ತಂಡಕ್ಕೆ ಟ್ರಬಲ್‌ಶೂಟರ್ ಆಗಿ ಕೆಲಸ ಮಾಡುತ್ತಾರೆ. ಆರಂಭಿಕ ಬ್ಯಾಟರ್ ಆಗಿ ಮಂಧಾನ ತಂಡಕ್ಕೆ ರನ್ನ ಕೊಡುಗೆಗಳನ್ನು ನೀಡುವುದಲ್ಲದೇ, ನಾಯಕಿ ಹರ್ಮನ್‌ಪ್ರೀತ್ ಕೌರ್ ಅನುಪಸ್ಥಿತಿಯಲ್ಲಿ ಅವರು ತಂಡವನ್ನು ಅತ್ಯುತ್ತಮ ರೀತಿಯಲ್ಲಿ ಮುನ್ನಡೆಸುತ್ತಾರೆ. 2023ರ ಏಷ್ಯನ್ ಗೇಮ್ಸ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ಅನುಪಸ್ಥಿತಿಯಲ್ಲಿ, ಮಂಧಾನ ತಂಡವನ್ನು ಅದ್ಭುತವಾಗಿ ಮುನ್ನಡೆಸಿ ಫೈನಲ್‌ಗೆ ಕೊಂಡೊಯ್ದರು. ಅಲ್ಲದೇ ಏಷ್ಯನ್ ಗೇಮ್ಸ್ 2023ರ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 46 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.