ಭಾರತ ತಂಡ ಭರವಸೆಯ ಯುವ ಬ್ಯಾಟರ್ ಶುಭಮನ್ ಗಿಲ್ ಇಂದು 24ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ವಿರಾಟ್ ರನ್ ಟೀಮ್ ಇಂಡಿಯಾದಲ್ಲಿ ಕಿಂಗ್ ಕೊಹ್ಲಿ ಎಂದು ಕರೆದರೆ, ಶುಭಮನ್ ಗಿಲ್ ಅವರನ್ನು ಪ್ರಿನ್ಸ್ ಎಂದೇ ಸಂಭೋದಿಸಲಾಗುತ್ತಿದೆ. ವಿರಾಟ್ ರೀತಿಯಲ್ಲೇ ತಂಡದಲ್ಲಿ ಈ ಬ್ಯಾಟರ್ ಭರವಸೆ ಮೂಡಿಸಿದ್ದಾರೆ. ತಮ್ಮ ಪ್ರಭಾವಿ ಫಾರ್ಮ್ನಿಂದ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.
ಈಗ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಬ್ಯಾಟರ್, 2019 ರಲ್ಲಿ ತಮ್ಮ ಅಂತಾರಾಷ್ಟ್ರೀಯ ಪಂದ್ಯಕ್ಕೆ ಚೊಚ್ಚಲ ಪ್ರವೇಶ ಮಾಡಿದರು. ಅಂದಿನಿಂದ, ಈ ಡ್ಯಾಶಿಂಗ್ ಸ್ಟ್ರೋಕ್-ಪ್ಲೇಯರ್ ವರ್ಷದಿಂದ ವರ್ಷಕ್ಕೆ ಉತ್ತಮ ಪ್ರದರ್ಶನ ನೀಡುತ್ತಾ ಬರುತ್ತಿರುವ ಗಿಲ್ ಅವರನ್ನು ಪ್ರಸ್ತುತ ಭಾರತೀಯ ಬ್ಯಾಟಿಂಗ್ ಶ್ರೇಷ್ಠ ವಿರಾಟ್ ಕೊಹ್ಲಿಯ ಉತ್ತರಾಧಿಕಾರಿ ಎಂದು ಪರಿಗಣಿಸಲಾಗಿದೆ.
2018ರಲ್ಲಿ ಭಾರತದ ಹತ್ತೊಂಬತ್ತು ವರ್ಷದೊಳಗಿನವರ ವಿಶ್ವಕಪ್ ವಿಜೇತ ತಂಡದಲ್ಲಿ ಪ್ರಮುಖ ಆಟಗಾರನಾಗಿ ಗಿಲ್ ಕಾಣಿಸಿಕೊಂಡಿದ್ದರು. ಈ ವಿಶ್ವಕಪ್ನಲ್ಲಿ ಉಪನಾಯಕನಾಗಿ ಆರು ಪಂದ್ಯಗಳಲ್ಲಿ, 124.00 ಸರಾಸರಿಯಲ್ಲಿ 372 ರನ್ ಗಳಿಸಿದರು. ಐದು ಇನ್ನಿಂಗ್ಸ್‌ಗಳಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳನ್ನು ಗಳಿಸಿ ಗಮನ ಸೆಳೆದಿದ್ದರು. ಸೆಮಿಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ 102 ರನ್‌ಗಳ ಅತ್ಯುತ್ತಮ ಸ್ಕೋರ್ ಆಗಿದೆ. 19 ವರ್ಷ ಒಳಗಿನವರ 2018ರ ವಿಶ್ವಕಪ್ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿ ಮೊದಲಿಗ, ಒಟ್ಟಾರೆ ಎರಡನೇ ಬ್ಯಾಟರ್ ಮತ್ತು 'ಪ್ಲೇಯರ್ ಆಫ್ ದಿ ಸೀರೀಸ್' ಪ್ರಶಸ್ತಿ ವಿಜೇತ.
ಅವಿಸ್ಮರಣೀಯ ಟೆಸ್ಟ್ ಡೆಬ್ಯು: 2021ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ - ಗವಾಸ್ಕರ್ ಟ್ರೋಫಿಯಲ್ಲಿ ಗಿಲ್ ತಮ್ಮ ಅದ್ಭುತ ಟೆಸ್ಟ್ ಪಾದಾರ್ಪಣೆಯನ್ನು ಮಾಡಿದರು. ಅಂದಿನಿಂದ ಭಾರತದ ಮೂರು ಮಾದರಿಯ ಕ್ರಿಕೆಟ್ನ ಆರಂಭಿಕ ಆಟಗಾರರಾಗಿ ಸ್ಥಾನ ಪಡೆದರು. ಈ ಟೆಸ್ಟ್ ಸರಣಿಯಲ್ಲಿ ಗಿಲ್ ಮೂರು ಪಂದ್ಯಗಳಿಂದ 51.80 ಸರಾಸರಿಯಲ್ಲಿ 259 ರನ್ ಗಳಿಸಿದರು. ಅವರು ಆರು ಇನ್ನಿಂಗ್ಸ್‌ಗಳಲ್ಲಿ ಎರಡು ಅರ್ಧ-ಶತಕಗಳನ್ನು ಗಳಿಸಿದರು, ಅಂತಿಮ ಟೆಸ್ಟ್‌ನಲ್ಲಿ ಐತಿಹಾಸಿಕ ಗೆಲುವಿನ ಸಮಯದಲ್ಲಿ ಗಬ್ಬಾದಲ್ಲಿ ಅವರ 91 ರನ್‌ಗಳನ್ನು ಆಸ್ಟ್ರೇಲಿಯಾದಲ್ಲಿ ಭಾರತೀಯ ಆಟಗಾರನ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಆಸಿಸ್ನ ಪ್ರಭಾವಿ ಬೌಲರ್ಗಳಾದ ಪ್ಯಾಟ್ ಕಮ್ಮಿನ್ಸ್, ಜೋಶ್ ಹೇಜಲ್‌ವುಡ್, ಮಿಚೆಲ್ ಸ್ಟಾರ್ಕ್ ಮತ್ತು ನಾಥನ್ ಲಿಯಾನ್‌ರ ದಾಳಿ ದಿಟ್ಟವಾಗಿ ಗಿಲ್ ಎದುರಿಸಿದ್ದು ದಿಗ್ಗಜ ಕ್ರಿಕೆಟಿಗರ ಮೆಚ್ಚುಗೆಗೆ ಪಾತ್ರವಾಯಿತು.