ಸೆಂಚುರಿಯನ್(ದಕ್ಷಿಣ ಆಫ್ರಿಕಾ): ನಾವು ದಕ್ಷಿಣ ಆಫ್ರಿಕಾದಲ್ಲಿ ಎಂದಿಗೂ ಟೆಸ್ಟ್ ಸರಣಿ ಗೆದ್ದಿಲ್ಲ. ಇದನ್ನು ಸಾಧಿಸುವುದು ದೊಡ್ಡ ವಿಷಯ. ಇದು ಏಕದಿನ ವಿಶ್ವಕಪ್ ಸೋಲಿನ ನೋವು ಮರೆಸುತ್ತದೆ ಎಂದು ನಾನು ಹೇಳಲಾರೆ. ಆದರೆ ನಮ್ಮ ಪ್ರಯತ್ನಕ್ಕೆ ನಾವು ಈ ಸರಣಿ ಗೆಲ್ಲಬೇಕಿದೆ. 'ಇತ್ನಾ ಮೆಹನತ್ ಕಿಯಾ ಹೈ ತೊ ಕುಚ್ ತೋ ಚಾಹಿಯೇ ಹಮ್ಕೋ' (ಇಷ್ಟೊಂದು ಕಷ್ಟ ಪಟ್ಟಿದ್ದೇವೆ, ಏನಾದರೂ ಲಾಭ ಆಗಬೇಕಲ್ಲ) ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಇಲ್ಲಿನ ಸೂಪರ್‌ಸ್ಪೋರ್ಟ್ ಪಾರ್ಕ್ನಲ್ಲಿ ಮಂಗಳವಾರದಿಂದ ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನಾದಿನ ರೋಹಿತ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ವಿಶ್ವಕಪ್ ಸೋಲಿನ ನಂತರ ನಡೆಯುತ್ತಿರುವ ಸರಣಿಯ ಬಗ್ಗೆ ಆತ್ಮವಿಶ್ವಾಸದಿಂದ ಮಾತನಾಡಿರುವ ಅವರು, ಸೋಲಿನ ಬಗ್ಗೆ ಬೇಸರವಿದೆ. ಆದರೆ ಅಭಿಮಾನಿಗಳು ನೀಡಿದ ಧೈರ್ಯ, ಪ್ರೋತ್ಸಾಹ, ವಿಶ್ವಾಸದಿಂದ ಮತ್ತೆ ಮೈದಾನಕ್ಕಿಳಿಯುವ ಶಕ್ತಿ ಬಂದಿದೆ ಎಂದರು.
ಮೊದಲ ಬಾರಿಗೆ ಕೆ.ಎಲ್.ರಾಹುಲ್ ಕೀಪಿಂಗ್:ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಕಮ್ಬ್ಯಾಕ್ ಮಾಡಿರುವ ಕೆ.ಎಲ್. ರಾಹುಲ್ ಬಗ್ಗೆ ಕೇಳಿದ ಪ್ರಶ್ನೆಗೆ, "ರಾಹುಲ್ ಎಲ್ಲಾ ಸ್ಥಾನಗಳಿಗೂ ಒಗ್ಗಿಕೊಂಡು ಬ್ಯಾಟಿಂಗ್ ಮಾಡುತ್ತಾರೆ. ಐದು, ಆರು, ಏಳನೇ ಕ್ರಮಾಂಕದಲ್ಲೂ ತಂಡಕ್ಕೆ ಸಾಥ್ ನೀಡುತ್ತಾರೆ. ಕಳೆದ ಬಾರಿಯ ಪ್ರವಾಸದಲ್ಲಿ ಆರಂಭಿಕರಾಗಿ ಶತಕ ಗಳಿಸಿದ್ದರು. ಪ್ರತಿಯೊಬ್ಬ ಕ್ರಿಕೆಟಿಗನೂ ತನ್ನ ವೃತ್ತಿಜೀವನದಲ್ಲಿ ವಿಭಿನ್ನ ಪಾತ್ರವನ್ನು ತೆಗೆದುಕೊಳ್ಳಬೇಕು. ಒಂದೇ ಸ್ಥಾನಕ್ಕೆ ಅಂಟಿಕೊಂಡಿರಬಾರದು. ಗಾಯದಿಂದ ಚೇತರಿಸಿಕೊಂಡ ಅವರು ವಿಶ್ವಕಪ್ನಲ್ಲಿ ನಿಜವಾಗಿಯೂ ಉತ್ತಮವಾಗಿ ನಿರ್ವಹಿಸಿದ್ದಾರೆ. ಅಲ್ಲದೇ ತಂಡಕ್ಕೆ ಅವರಿಂದ ಯಾವ ರೀತಿಯ ಕೊಡುಗೆ ನೀಡಬಹುದು ಎಂಬುದರ ಬಗ್ಗೆ ಅವರು ಬಲ್ಲರು. ಅವರ ಜಬಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಕೆ.ಎಲ್.ರಾಹುಲ್ ಇದೇ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಇನ್ನು, ವೈಯಕ್ತಿಕ ಕಾರಣಗಳಿಂದಾಗಿ ಇಶಾನ್ ಕಿಶನ್ ಸರಣಿಯಿಂದ ಹಿಂದೆ ಸರಿದರೆ, ಕಳೆದ ವರ್ಷ ಕಾರು ಅಪಘಾತದಲ್ಲಿ ಗಾಯಗೊಂಡ ರಿಷಬ್ ಪಂತ್ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ರಾಹುಲ್ ಕೀಪರ್ ಸ್ಥಾನವನ್ನು ತುಂಬುತ್ತಿದ್ದಾರೆ.