ಜಾರ್ಜ್‌ಟೌನ್ (ಗಯಾನಾ):ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಆಂಧ್ರ ಪ್ರದೇಶದ ಬ್ಯಾಟರ್ ತಿಲಕ್ ವರ್ಮಾ, ತಮ್ಮ ಉತ್ತಮ ಪ್ರದರ್ಶನಕ್ಕೆ ರೋಹಿತ್ ಶರ್ಮಾ ಪ್ರೇರಣೆ ಎಂದು ಹೇಳಿದ್ದಾರೆ. ಐಪಿಎಲ್ನ ಗೋಲ್ಡನ್ ಫಾರ್ಮ್ ಮುಂದುವರೆಸಿರುವ ವರ್ಮಾ, ತಾವು ಆಡಿರುವ ಎರಡು ಪಂದ್ಯಗಳಿಂದ 90 ರನ್ ಕಲೆಹಾಕಿದ್ದಾರೆ. ಎರಡನೇ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಚೊಚ್ಚಲ ಅರ್ಧಶತಕವನ್ನೂ ದಾಖಲಿಸಿದ್ದಾರೆ.
ವಿಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದ ನಂತರ ಮಾತನಾಡಿದ ಅವರು, "ರೋಹಿತ್ ಶರ್ಮಾ ನನಗೆ ಬೆಂಬಲ ನೀಡಿದ್ದಾರೆ. ನನ್ನ ಆಟವನ್ನು ಸುಧಾರಿಸಲು ಸಹಾಯ ಮಾಡಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹೇಗೆ ಪ್ರದರ್ಶನ ನೀಡಬೇಕೆಂದು ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಸುರೇಶ್ ರೈನಾ ಮತ್ತು ರೋಹಿತ್ ಶರ್ಮಾರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ರೋಹಿತ್ ಶರ್ಮಾರಿಂದ ಹೆಚ್ಚು ಕಲಿತೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಅವರು ನನಗೆ ಸಾಕಷ್ಟು ವಿಚಾರಗಳನ್ನು ಹೇಳಿಕೊಟ್ಟರು" ಎಂದು ನೆನಪಿಸಿಕೊಂಡರು.
ಅರ್ಧಶತಕದ ನಂತರ ಪ್ರದರ್ಶಿಸಿರುವ ವಿಶಿಷ್ಠ ರೀತಿಯ ಸಂಭ್ರಮಾಚರಣೆ ಬಗ್ಗೆ ಕೇಳಿದಾಗ, "ಆ ಆಚರಣೆ ರೋಹಿತ್ ಶರ್ಮಾ ಅವರ ಪುತ್ರಿ ಸಮ್ಮಿ (ಸಮೈರಾ) ಅವರಿಗಾಗಿ. ನಾನು ಸಮ್ಮಿಯ ಜೊತೆ ಹೆಚ್ಚು ಕಾಲ ಕಳೆದಿದ್ದೇನೆ. ನಾನು ಶತಕ ಅಥವಾ ಅರ್ಧಶತಕ ಬಾರಿಸಿದಾಗ ಆಕೆಗಾಗಿ ಹೀಗೆ ಸಂಭ್ರಮಾಚರಣೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದೆ" ಎಂದು ಹೇಳಿದರು.
''ಅಂತಾರಾಷ್ಟ್ರೀಯ ಕ್ರಿಕೆಟ್ ಸುಲಭವಲ್ಲ. ಇದರಲ್ಲಿ ಹೆಚ್ಚು ಕಾಲ ಉಳಿಯಲು ನೀವು ಸ್ಥಿರ ಪ್ರದರ್ಶನ ನೀಡಬೇಕು. ಮೈದಾನ ಮತ್ತು ಹೊರಗೆ ಶಿಸ್ತುಬದ್ಧವಾಗಿರಬೇಕು. ನಾನು ಈ ವಿಷಯಗಳಲ್ಲಿ ಹೆಚ್ಚು ಗಮನ ಕೇಂದ್ರೀಕರಿಸಲು ಇಷ್ಟಪಡುತ್ತೇನೆ. 2023ರ ಐಪಿಎಲ್ ನನ್ನ ಜೀವನದಲ್ಲೊಂದು ಮಹತ್ವದ ತಿರುವು ಕೊಟ್ಟಿದೆ. ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆ ಫಾರ್ಮ್ ಮುಂದುವರೆಸಿಕೊಂಡು ಹೋಗುತ್ತೇನೆ" ಎಂದು ವಿಶ್ವಾಸದ ನುಡಿಗಳನ್ನಾಡಿದರು.