ಹೈದರಾಬಾದ್: ಭಾರತದಲ್ಲಿ ಕ್ರಿಕೆಟ್ಗೆ ಮಾನ್ಯತೆ ಹೆಚ್ಚಾಗಿದ್ದು, ಆಟಗಾರರ ಸಂಖ್ಯೆಯೂ ಕಡಿಮೆ ಇಲ್ಲ. ಹೀಗಾಗಿ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡುವುದು ಕಠಿಣ ಕೆಲಸವೇ ಸರಿ. ಆದರೆ, ಆಯ್ಕೆಗೆ ಒಂದು ಮಾನದಂಡ ಎಂಬುದು ಇರುತ್ತದೆ. ಈಗ ಭಾರತದ ಕ್ರಿಕೆಟ್ ಅಭಿಮಾನಿಗಳು ಬಿಸಿಸಿಐನ ಆಯ್ಕೆ ಸಮಿತಿಗೆ ಆಯ್ಕೆಗೆ ಅನುಸರಿಸಲಾಗುವ ಮಾನದಂಡ ಏನು ಎಂದು ಪ್ರಶ್ನೆ ಕೇಳುತ್ತಿದ್ದಾರೆ.
ಅಭಿಮಾನಿಗಳ ಈ ಪ್ರಶ್ನೆಗೆ ಕಾರಣ ಆಗಿರುವುದು ಆಸ್ಟ್ರೇಲಿಯಾದ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ಆಯ್ಕೆ ಆಗಿರುವ ತಂಡದಿಂದಾಗಿ. ಗುರುವಾರದಿಂದ ಆರಂಭವಾಗುವ ಆಸೀಸ್ ವಿರುದ್ಧದ 5 ಟಿ20 ಪಂದ್ಯಗಳ ಸರಣಿಗೆ ಸೂರ್ಯಕುಮಾರ್ ಯಾದವ್ ಅವರ ನಾಯಕತ್ವದಲ್ಲಿ ತಂಡವನ್ನು ಆಯ್ಕೆ ಮಾಡಲಾಗಿದೆ. ಐರ್ಲೆಂಡ್ ವಿರುದ್ಧದ ಸರಣಿಗೆ ಹೆಚ್ಚು ಯುವಕರನ್ನೇ ಒಳಗೊಂಡ ಟಿ20 ತಂಡವನ್ನು ಕಳಿಸಲಾಗಿತ್ತು. ಇದಕ್ಕೆ ಬಹುತೇಕ 16ನೇ ಆವೃತ್ತಿಯ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದವರನ್ನು ಆಯ್ಕೆ ಮಾಡಲಾಗಿತ್ತು. ಈಗ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೂ ಹೆಚ್ಚು ಅದೇ ತಂಡವನ್ನು ಉಳಿಸಿಕೊಳ್ಳಲಾಗಿದೆ.
ಐಪಿಎಲ್ ಪ್ರದರ್ಶನವನ್ನೇ ಲೆಕ್ಕಕ್ಕೆ ತೆಗೆದುಕೊಂಡ ಆಯ್ಕೆ ಸಮಿತಿ ದೇಶೀಯ ಟಿ20 ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ (ಎಸ್ಎಂಎಟಿ) ಆಟವನ್ನು ಪರಿಗಣಿಸಿಲ್ಲ. ಬ್ಯಾಟರ್‌ಗಳಾದ ರಿಯಾನ್ ಪರಾಗ್, ಅಭಿಷೇಕ್ ಶರ್ಮಾ ಮತ್ತು ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಆದರೆ ಆಯ್ಕೆ ಸಮಿತಿ ಮಾತ್ರ ಇವರುಗಳ ಆಟವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ.
ಭಾರತ ತಂಡದವನ್ನು ಈ ಹಿಂದೆ ಪ್ರತಿನಿಧಿಸಿದ್ದ ಭುವನೇಶ್ವರ್ ಕುಮಾರ್ ಎಸ್ಎಂಎಟಿಯಲ್ಲಿ ಏಳು ಪಂದ್ಯಗಳನ್ನು ಆಡಿದ್ದು 5.84 ಎಕಾನಮಿಯಿಂದ 16 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ ಭುವಿ ಇತ್ತೀಚೆಗೆ ಗಂಟೆಗೆ 130ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಅವರ ವೇಗ ಕಡಿಮೆ ಆಗಿರುವುದೇ ಅವರನ್ನು ಕೈಬಿಡಲು ಕಾರಣ ಎನ್ನಲಾಗುತ್ತಿದೆ.
ಪರಾಗ್, ಶರ್ಮಾಗೆ ಸಿಗದ ಅವಕಾಶ:ಯುವ ಆಟಗಾರರಾದ ರಿಯಾನ್ ಪರಾಗ್ ಮತ್ತು ಅಭಿಷೇಕ್ ಶರ್ಮಾ ಎಸ್ಎಂಎಟಿಯಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದಾರೆ. ಅಸ್ಸೋಂ ಪರ ಆಡುತ್ತಿರುವ ಪರಾಗ್ ಅವರು 182 ಸ್ಟ್ರೈಕ್ ರೇಟ್‌ನೊಂದಿಗೆ ಏಳು ಅರ್ಧಶತಕಗಳು ಸೇರಿದಂತೆ 10 ಪಂದ್ಯಗಳಿಂದ 510 ರನ್‌ಗಳೊಂದಿಗೆ ಪಂದ್ಯಾವಳಿಯಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.
ಪಂಜಾಬ್ ತಂಡದಲ್ಲಿ ಬ್ಯಾಟಿಂಗ್ ಜೊತೆಗೆ ಎಡಗೈ ಸ್ಪಿನ್ನರ್ ಕೂಡ ಆಗಿರುವ ಶರ್ಮಾ ಎಸ್ಎಂಎಟಿಯ 10 ಪಂದ್ಯಗಳಿಂದ 485 ರನ್ ಗಳಿಸುವ ಮೂಲಕ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 192 ಸ್ಟ್ರೈಕ್-ರೇಟ್‌ನೊಂದಿಗೆ ಎರಡು ಶತಕ ಮತ್ತು ಮೂರು ಅರ್ಧಶತಕವನ್ನು ಶರ್ಮಾ ಕಲೆಹಾಕಿದ್ದಾರೆ. ಈ ಪಂದ್ಯಾವಳಿಯ ಪ್ರದರ್ಶನದ ನಂತರ ಈ ಯುವ ಪ್ರತಿಭೆಗಳಿಗೆ ಭಾರತ ತಂಡದ ಕದ ತೆರೆಯುವ ನಿರೀಕ್ಷೆ ಇತ್ತು, ಆದರೆ ಅದು ಹುಸಿಯಾಗಿದೆ.
ಸ್ಥಾನ ಕಳೆದುಕೊಂಡ ಚಹಾಲ್: ಟಿ20 ಸ್ಪಿನ್ ಸ್ಪೆಷಾಲಿಸ್ಟ್ ಎಂದೇ ಕರೆಸಿಕೊಳ್ಳುತ್ತಿದ್ದ ಯಜುವೇಂದ್ರ ಚಹಾಲ್ ಸಹ ತಂಡಕ್ಕೆ ಮರಳಿಲ್ಲ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ತಂಡದ ಜೊತೆಗೆ ಚಹಾಲ್ ಇದ್ದರು. ಆದರೆ ನಂತರ ಏಷ್ಯಾಕಪ್ ಮತ್ತು ವಿಶ್ವಕಪ್ ತಂಡದಲ್ಲಿ ಅವರಿಗೆ ಸ್ಥಾನ ಸಿಕ್ಕಿಲ್ಲ. ಹಾಗೇ ಈಗ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಗೂ ಆಯ್ಕೆ ಮಾಡಿಕೊಂಡಿಲ್ಲ. ಆಯ್ಕೆ ಆಗದಿದ್ದದ್ದಕ್ಕೆ ಎಕ್ಸ್ ಆ್ಯಪ್ನಲ್ಲಿ ಚಹಾಲ್ ಸ್ಮೈಲಿ ಎಮೋಜಿ ಹಾಕಿ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಮುಖೇಶ್ ಕುಮಾರ್
ಇದನ್ನೂ ಓದಿ:ತಂಡದಲ್ಲಿ ಸಂಜು ಸ್ಯಾಮ್ಸನ್ಗೆ ಸ್ಥಾನ ಏಕಿಲ್ಲ?; ಬಿಸಿಸಿಐ ವಿರುದ್ಧ ನೆಟ್ಟಿಗರ ಕಿಡಿ