ರಾವಲ್ಪಿಂಡಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಶುಕ್ರವಾರ ರಾವಲ್ಪಿಂಡಿಯಲ್ಲಿ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. 24 ವರ್ಷಗಳ ನಂತರ ಕಾಂಗರೂ ಬಳಗ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದು ಐತಿಹಾಸಿಕ ಪಂದ್ಯದ ಎಲ್ಲಾ ಟಿಕೆಟ್ಗಳು ಈಗಾಗಲೆ ಮಾರಾಟವಾಗಿವೆ.
ಲೆಜೆಂಡರಿ ಆಸ್ಟ್ರೇಲಿಯನ್ ಆಲ್ರೌಂಡರ್ ರಿಚಿ ಬೆನೌಡ್ ಮತ್ತು ಪಾಕಿಸ್ತಾನಿ ಲೆಗ್ ಸ್ಪಿನ್ನರ್ ಅದ್ಭುಲ್ ಖಾದಿರ್ ಅವರಿಗೆ ಗೌರವ ಸಲ್ಲಿಸಲು ಪಾಕಿಸ್ತಾನ vs ಆಸ್ಟ್ರೇಲಿಯಾ ನಡುವಿನ ಈ ಟೆಸ್ಟ್ ಸರಣಿಯನ್ನು ಬೆನೌಟ್-ಖಾದಿರ್ ಟ್ರೋಫಿ ಎಂದು ನಾಮಕರಣ ಮಾಡಲಾಗಿದೆ. ಆಸ್ಟ್ರೇಲಿಯಾ 1998ರ ನಂತರ ಮೊದಲ ಬಾರಿಗೆ ಪಾಕಿಸ್ತಾನ ಪ್ರವಾಸ ಕೈಗೊಂಡಿದೆ.
ದೀರ್ಘ ವಿರಾಮದ ನಂತರ ಪಾಕಿಸ್ತಾನ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಆತಿಥ್ಯ ವಹಿಸಿಕೊಳ್ಳುವುದಕ್ಕೆ ಶುರು ಮಾಡಿದ ಮೇಲೆ ರಾವಲ್ಪಿಂಡಿಯಲ್ಲಿ ಕೇವಲ 4 ಟೆಸ್ಟ್ ಪಂದ್ಯಗಳು ಮಾತ್ರ ನಡೆದಿವೆ.
ಆಸ್ಟ್ರೇಲಿಯಾ ಇತ್ತೀಚೆಗೆ ಟಿ20 ವಿಶ್ವಕಪ್ ಮತ್ತು ಆ್ಯಶಸ್ ಸರಣಿಯನ್ನು 4-0ಯಲ್ಲಿ ಗೆದ್ದು ಅತ್ಯುತ್ತಮ ಲಯದಲ್ಲಿದೆ. ಆದರೆ 2016ರಲ್ಲಿ ನ್ಯೂಜಿಲ್ಯಾಂಡ್ನಲ್ಲಿ ಟೆಸ್ಟ್ ಸರಣಿಯನ್ನು ಗೆದ್ದದ್ದು ಬಿಟ್ಟರೆ ಇಲ್ಲಿಯವರೆಗೆ ವಿದೇಶಿ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲಲು ವಿಫಲವಾಗಿದೆ. ಆಸ್ಟ್ರೇಲಿಯಾ ತಂಡ ವೇಗಿಗಳಿಗಳಿಂದ ತುಂಬಿದೆ, ಆದರೆ ಪಾಕಿಸ್ತಾನದಲ್ಲಿನ ಟರ್ನಿಂಗ್ ವಿಕೆಟ್ಗಳಿಗೆ ಒಗ್ಗಿಕೊಳ್ಳಬೇಕಿದೆ ಮತ್ತು ತಂಡದಲ್ಲಿ 2 ಅಥವಾ 3 ಸ್ಪಿನ್ನರ್ಗಳ ಜೊತೆಯಲ್ಲಿ ಕಣಕ್ಕಿಳಿಯಬೇಕಿದೆ.