ಬೆಂಗಳೂರು:ಕರ್ನಾಟಕ ಮತ್ತು ಸೌರಾಷ್ಟ್ರ ಮಧ್ಯೆ ನಡೆಯುತ್ತಿರುವ 2ನೇ ಸೆಮಿಫೈನಲ್ ಪಂದ್ಯ ಕುತೂಹಲಘಟ್ಟ ತಲುಪಿದೆ. ರಾಜ್ಯ ತಂಡದ ನಾಯಕ ಮಯಾಂಕ್ ಅಗರ್ವಾಲ್ ದ್ವಿಶತದ ಏಕಾಂಗಿ ಹೋರಾಟದಿಂದ 407 ರನ್ ಗುರಿ ನೀಡಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ನಡೆಸಿದ ಸೌರಾಷ್ಟ್ರ ಆರಂಭಿಕ ಹಿನ್ನಡೆಯನ್ನು ಮೀರಿ ಶೆಲ್ಡನ್ ಜಾಕ್ಸನ್, ನಾಯಕ ಅರ್ಪಿತ್ ವಸವದ ಶತಕದ ನೆರವಿನಿಂದ 4 ವಿಕೆಟ್‌ಗೆ 364 ರನ್ ಗಳಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸೌರಾಷ್ಟ್ರ ಮೂರನೇ ದಿನದಾಟದಲ್ಲಿ ಉತ್ತಮ ಆಟವಾಡುವ ಮೂಲಕ ಪೂರ್ಣ ಶ್ರೇಯಾಂಕ ಪಡೆಯಿತು. ಎರಡನೇ ದಿನದ ಕೊನೆಯಲ್ಲಿ 76 ಕ್ಕೆ 2 ವಿಕೆಟ್ ಕಿತ್ತು ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಕರ್ನಾಟಕದ ಯೋಜನೆಯನ್ನು ನಾಯಕ ಅರ್ಪಿತ್ ವಸವದ ಮತ್ತು ಶೆಲ್ಡನ್ ಜಾಕ್ಸನ್ ಬುಡಮೇಲು ಮಾಡಿದರು. ಹರ್ವಿಕ್ ದೇಸಾಯಿ ಜೊತೆಗೂಡಿ ಮೂರನೇ ದಿನದಾಟ ಆರಂಭಿಸಿದ ಜಾಕ್ಸನ್ ರನ್ ಪೇರಿಸಲು ಶುರು ಮಾಡಿದರು. ಇದೇ ವೇಳೆ ಕೌಶಿಕ್ ಎಸೆತದಲ್ಲಿ ಹರ್ವಿಕ್ ಔಟಾದರು.
ದ್ವಿಶತಕದ ಜೊತೆಯಾಟ: ಬಳಿಕ ಜೊತೆಗೂಡಿದ ಶೆಲ್ಡನ್ ಜಾಕ್ಸನ್ ಮತ್ತು ನಾಯಕ ಅರ್ಪಿತ್ ವಸವದ ಕರ್ನಾಟಕ ಬೌಲರ್ಗಳನ್ನು ಸುಸ್ತು ಮಾಡಿದರು. ಭರ್ಜರಿ ಬ್ಯಾಟ್ ಬೀಸಿದ ಜಾಕ್ಸನ್ 245 ಎಸೆತಗಳಲ್ಲಿ 23 ಬೌಂಡರಿ, 2 ಸಿಕ್ಸರ್ ಸಮೇತ 160 ರನ್ ಮಾಡಿದರು. ಇನ್ನೊಂದು ತುದಿಯಲ್ಲಿ ನಾಯಕ ಅರ್ಪಿತ್ 219 ಎಸೆತಗಳಲ್ಲಿ 15 ಬೌಂಡರಿಗಳಿದ್ದ 112 ರನ್ ಮಾಡಿದರು. ಇಬ್ಬರೂ ಸೇರಿ 232 ರನ್ಗಳ ದ್ವಿಶತಕದ ಜೊತೆಯಾಟವಾಡಿದರು.
ದ್ವಿಶತಕದತ್ತ ಮುನ್ನುಗ್ಗುತ್ತಿದ್ದ ಜಾಕ್ಸನ್ ಓಟಕ್ಕೆ ದಿನದಾಟ ಮುಗಿಯಲು 13 ಓವರ್ ಬಾಕಿ ಇದ್ದಾಗ ಸ್ಪಿನ್ನರ್ ಕೆ. ಗೌತಮ್ ಬ್ರೇಕ್ ಹಾಕಿದರು. ಇಬ್ಬರು ಆಟಗಾರರ ಶತಕದಿಂದ ಸೌರಾಷ್ಟ್ರ 43 ರನ್ಗಳ ಹಿನ್ನಡೆಯಲ್ಲಿದ್ದು, ಇನ್ನೂ ಎರಡು ದಿನ ಆಟ ಬಾಕಿ ಉಳಿದಿದೆ. 6 ವಿಕೆಟ್ಗಳು ಕೈಯಲ್ಲಿದ್ದು ದೊಡ್ಡ ಮೊತ್ತ ಪೇರಿಸುವ ಗುರಿ ಹೊಂದಿದೆ. ಚಿರಾಗ್ ಜಾನಿ (ಔಟಾಗದೆ 19) ಮತ್ತು ಅರ್ಪಿತ್ ಔಟಾಗದೇ 112 ರನ್ ಗಳಿಸಿ ಕ್ರೀಸ್ ನಾಳೆಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ರಾಜ್ಯಕ್ಕೆ ದಿನದಲ್ಲಿ ಸಿಕ್ಕಿದ್ದು 2 ವಿಕೆಟ್:ಮೂರನೇ ದಿನದಾಟದಲ್ಲಿ ಪಿಚ್ ಸ್ಪಿನ್ನರ್ಗಳಿಗೆ ನೆರವು ನೀಡಲಿದೆ ಎಂದು ಭಾವಿಸಲಾಗಿತ್ತು. ಸ್ಪಿನ್ನರ್ ಕೆ.ಗೌತಮ್ ಮತ್ತು ಶ್ರೇಯಸ್ ಗೋಪಾಲ್ ಮೇಲೆ ಹೆಚ್ಚಿನ ನಿರೀಕ್ಷೆ ಹೊಂದಲಾಗಿತ್ತು. ಆದರೆ, 90 ಓವರ್ಗಳ ದಿನದಾಟದಲ್ಲಿ ರಾಜ್ಯ ತಂಡಕ್ಕೆ ಸಿಕ್ಕಿದ್ದು ಕೇವಲ 2 ವಿಕೆಟ್ ಮಾತ್ರ. ಅದು ಭರ್ಜರಿ ಬ್ಯಾಟ್ ಮಾಡಿ ಶತಕ ಸಿಡಿಸಿದ ಜಾಕ್ಸನ್ ಮತ್ತು ನಿನ್ನೆ ವಿಕೆಟ್ ಕಾಯ್ದುಕೊಂಡಿದ್ದ ಹರ್ವಿಕ್ ದೇಸಾಯಿ.