ನವದೆಹಲಿ :ಜೋಸ್ ಬಟ್ಲರ್ ಸಿಡಿಲಬ್ಬರದ ಶತಕ, ಕ್ರಿಸ್ ಮೋರಿಸ್ ಮತ್ತು ಮುಸ್ತಫಿಜುರ್ ರಹಮಾನ್ ಅವರ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ರಾಜಸ್ಥಾನ್ ರಾಯಲ್ಸ್ 55 ರನ್ಗಳ ಅಂತರದಿಂದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.
ರಾಜಸ್ಥಾನ್ ರಾಯಲ್ಸ್ ನೀಡಿದ 221 ರನ್ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್ ನಿರಂತರ ವಿಕೆಟ್ ಕಳೆದುಕೊಂಡು 165ರನ್ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಬ್ಯಾಟ್ಸ್ಮನ್ಗಳಾದ ಮನೀಶ್ ಪಾಂಡೆ 31 ಮತ್ತು ಜಾನಿ ಬೈರ್ಸ್ಟೋವ್ 30 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಆದರು.
ಈ ಇಬ್ಬರು ಮೊದಲ ವಿಕೆಟ್ಗೆ 57 ರನ್ಗಳ ಜೊತೆಯಾಟ ನೀಡಿ ಉತ್ತಮ ಆರಂಭ ಒದಗಿಸಿದರು. ಆದರೆ, ಈ ಜೋಡಿ ಪೆವಿಲಿಯನ್ಗೆ ಮರಳುತ್ತಿದ್ದಂತೆ ಹೈದರಾಬಾದ್ ತಂಡ ನಿರಂತರವಾಗಿ ವಿಕೆಟ್ ಕಳೆದುಕೊಂಡಿತು.
ರನ್ಗಳಿಸಲು ಪರದಾಡಿದ ವಿಲಿಯಮ್ಸನ್ 21ಎಸೆತಗಳಲ್ಲಿ ಕೇವಲ ಒಂದು ಬೌಂಡರಿ ಸಹಿತ 20 ರನ್ಗಳಿಸಿ ಔಟಾದರು. ನಂತರ ಬಂದಂತಹ ವಿಜಯ್ ಶಂಕರ್ 8, ಕೇದಾರ್ ಜಾಧವ್ 19, ನಬಿ 17, ಸಮದ್ 10, ಭುವನೇಶ್ವರ್ ಅಜೇಯ 14 ರನ್ಗಳಿಸಿದರು.
ರಾಯಲ್ಸ್ ಪರ ಕ್ರಿಸ್ ಮೋರಿಸ್ 29ಕ್ಕೆ 3 ಹಾಗೂ ಮುಸ್ತಫಿಜುರ್ ರಹಮಾನ್ 20ಕ್ಕೆ 3 ವಿಕೆಟ್ ಪಡೆದು ಮಿಂಚಿದರು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ರಾಯಲ್ಸ್ ಆರಂಭಿಕ ಬ್ಯಾಟ್ಸ್ಮನ್ ಜೋಸ್ ಬಟ್ಲರ್(124) ಶತಕದ ನೆರವಿನಿಂದ 220 ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು.