ಮೆಲ್ಬೋರ್ನ್: UAEನಲ್ಲಿ ನಡೆಯಲಿರುವ ದ್ವಿತೀಯಾರ್ಧದ ಐಪಿಎಲ್ನಲ್ಲಿ ಆಡುವುದಕ್ಕೆ ಆಸೀಸ್ ಕ್ರಿಕೆಟಿಗರು ಒಪ್ಪಿಕೊಂಡಿರುವುದನ್ನು ಸಮರ್ಥಿಸಿಕೊಂಡಿರುವ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್, ಇದು ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ತಯಾರಿಗೆ ಅನುಕೂಲ ಕಲ್ಪಿಸಿದೆ ಎಂದು ಹೇಳಿದ್ದಾರೆ.
ಮೊದಲಾರ್ಧದಲ್ಲಿ ಒಟ್ಟು 29 ಪಂದ್ಯಗಳು ನಡೆದಿದ್ದವು. ಇದೀಗ ದ್ವಿತೀಯಾರ್ಧದಲ್ಲಿ ಒಟ್ಟು 31 ಪಂದ್ಯಗಳು ಯುಎಇಯ ಮೂರು ಕ್ರೀಡಾಂಗಣದಲ್ಲಿ ನಡೆಯಲಿದೆ. ಯುಎಇನಲ್ಲಿ ಬಿಸಿಸಿಐ ಟೂರ್ನಮೆಂಟ್ನಲ್ಲಿ ಭಾಗವಹಿಸಬಾರದೆಂದು ಮಾಜಿ ಕ್ರಿಕೆಟಿಗರು ಹೇಳಿದ್ದರು. ಆದರೆ, ಇದೀಗ ಆಸ್ಟ್ರೇಲಿಯಾ ಕ್ರಿಕೆಟಿಗರು ಸೇರಿದಂತೆ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ಕ್ರಿಕೆಟಿಗರು ಕೂಡ ಮುಂದುವರಿದ ಐಪಿಎಲ್ ಆಡಲು ಒಪ್ಪಿದ್ದಾರೆ. ಈ ನಿರ್ಧಾರವನ್ನು ಪಾಂಟಿಂಗ್ ಸಮರ್ಥಿಸಿಕೊಂಡಿದ್ದಾರೆ.
ಡೇವಿಡ್ ವಾರ್ನರ್, ಗ್ಲೇನ್ ಮ್ಯಾಕ್ಸ್ವೆಲ್ , ಸ್ಟೀವ್ ಸ್ಮಿತ್ ಯಾವ ಹುಡುಗರು ಕಳೆದ ಮೂರು ನಾಲ್ಕು ತಿಂಗಳಿನಿಂದ ಕ್ರಿಕೆಟ್ ಆಡಿದಲ್ಲವೋ, ಅಂತಹವರಿಗೆ ಕಮ್ ಬ್ಯಾಕ್ ಮಾಡಲು ವಿಶ್ವದರ್ಜೆಯ ಬೌಲರ್ಗಳ ಎದುರು ಉತ್ತಮ ಗುಣಮಟ್ಟದ ಕ್ರಿಕೆಟ್ ಆಡುವುದು ಅಗತ್ಯವಾಗಿದೆ ಎಂದು ಪಾಂಟಿಂಗ್ ಆಸ್ಟ್ರೇಲಿಯಾ ಟೆಸ್ಟ್ ನಾಯಕ ಟಿಮ್ ಪೇನ್ ಅವರೊಂದಿಗೆ ಸೆನ್ ರೇಡಿಯೋದಲ್ಲಿ ನಡೆಸಿದ ಸಂವಾದದಲ್ಲಿ ಹೇಳಿದ್ದಾರೆ.
ವಿಶ್ವಕಪ್ ನಡೆಯುವ ಸ್ಥಳದಲ್ಲಿ ಮತ್ತು ವಿಶ್ವದ ಅತ್ಯುತ್ತಮ ಟಿ-20 ಡೊಮೆಸ್ಟಿಕ್ ಲೀಗ್ನಲ್ಲಿ ಆಡುವುದು ವಿಶ್ವಕಪ್ ಸಿದ್ಧತೆಗೆ ಅತ್ಯುತ್ತಮ ವೇದಿಕೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ ಮುಖ್ಯ ಕೋಚ್ ಆಗಿರುವ ರಿಕಿ ಪಾಂಟಿಂಗ್ ಹೇಳಿದ್ದಾರೆ.
ಇತ್ತೀಚೆಗೆ ಅಂತ್ಯಗೊಂಡ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ಪ್ರವಾಸದಲ್ಲಿ ಆಸ್ಟ್ರೇಲಿಯಾ ತಂಡದಲ್ಲಿದ್ದ ರಿಲೇ ಮೆರಿಡಿತ್, ಡೇನಿಯಲ್ ಕ್ರಿಶ್ಚಿಯನ್, ಮೊಯಿಸಸ್ ಹೆನ್ರಿಕ್ಸ್, ಮಿಚೆಲ್ ಮಾರ್ಷ್, ಆ್ಯಡಂ ಜಂಪಾ, ಆ್ಯಂಡ್ರ್ಯೂ ಟೈ ಮತ್ತು ಜೋಶ್ ಪಿಲಿಪ್ಪೆ ಐಪಿಎಲ್ನಲ್ಲಿ ಒಪ್ಪಂದ ಹೊಂದಿದ್ದಾರೆ. ಇವರ ಜೊತೆಗೆ ಸಿಎ ವಾರ್ಷಿಕ ಗುತ್ತಿಗೆಯಲ್ಲಿಲ್ಲದ ನಥನ್ ಕೌಲ್ಟರ್ ಲೈನ್, ಕ್ರಿಸ್ ಲಿನ್, ಬೆನ್ ಕಟಿಂಗ್ ಕೂಡ ಐಪಿಎಲ್ ಒಪ್ಪಂದ ಹೊಂದಿದ್ದಾರೆ.
ಇನ್ನು ಆಸ್ಟ್ರೇಲಿಯಾದ ಇತ್ತೀಚಿನ ಸರಣಿಗಳಿಂದ ಹೊರಗುಳಿದಿದ್ದ ಡೇವಿಡ್ ವಾರ್ನರ್, ಮ್ಯಾಕ್ಸ್ವೆಲ್, ಸ್ಟೀವ್ ಸ್ಮಿತ್, ಕೇನ್ ರಿಚರ್ಡ್ಸನ್, ಜೇ ರಿಚರ್ಡ್ಸನ್, ಡೇನಿಯಲ್ ಸ್ಯಾಮ್ಸ್ ಕೂಡ ಐಪಿಎಲ್ ಮೂಲಕ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಲಿದ್ದಾರೆ.
ಇದನ್ನು ಓದಿ:ತಂಡದಿಂದ ಕೈಬಿಟ್ಟ ನೋವನ್ನೇ ಇಂಧನವಾಗಿಸಿಕೊಂಡು ಕನ್ನಡಿಗ ಕೆ ಎಲ್ ರಾಹುಲ್ ಭರ್ಜರಿ ಕಮ್ಬ್ಯಾಕ್