ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು 2021ರ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದ ಈಗಾಗಲೇ ಪ್ಲೇ ಆಫ್ ಪ್ರವೇಶಿಸಿದೆ. ಪ್ರಸ್ತುತ 3ನೇ ಸ್ಥಾನದಲ್ಲಿರುವ ವಿರಾಟ್ ಬಳಗ ಬುಧವಾರ ನಡೆಯಲಿರುವ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿ ಅಗ್ರ ಎರಡು ತಂಡಗಳಲ್ಲಿ ಒಂದಾಗಲು ಬಯಸುತ್ತಿದೆ.
ಪ್ರಸ್ತುತ ಆರ್ಸಿಬಿ ಆಡಿರುವ 12 ಪಂದ್ಯಗಳಲ್ಲಿ 8 ಗೆಲುವು ಮತ್ತ್ತು 4 ಸೋಲು ಕಂಡಿದ್ದು, 16 ಅಂಕಗಳನ್ನು ಹೊಂದಿದೆ. ಉಳಿದ ಪಂದ್ಯಗಳನ್ನು ಗೆದ್ದು ಅಗ್ರ ಎರಡಲ್ಲಿ ಮುಗಿಸುವ ಆಲೋಚನೆಯಲ್ಲಿದೆ. 13 ಪಂದ್ಯಗಳಿಂದ 18 ಅಂಕಗಳನ್ನು ಹೊಂದಿರುವ ಸಿಎಸ್ಕೆ 2ನೇ ಸ್ಥಾನದಲ್ಲಿದೆ. ಆದರೆ, ರನ್ರೇಟ್ನಲ್ಲಿ ಎಲ್ಲ ತಂಡಗಳಿಗಿಂತ ಉತ್ತಮವಾಗಿರುವುದರಿಂದ ಮೊದಲೆರಡು ಸ್ಥಾನ ಉಳಿಸಿಕೊಳ್ಳುವ ಅವಕಾಶ ಹೆಚ್ಚಿದೆ.
ಇಂದು ಬುಧವಾರ ಅಬುಧಾಬಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ವಿರಾಟ್ ಬಳಗ ಸೋತು ಸುಣ್ಣವಾಗಿರುವ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯುತ್ತಿದೆ. ಮ್ಯಾಕ್ಸ್‌ವೆಲ್, ಪಡಿಕ್ಕಲ್, ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಇನ್ನು ಬೌಲಿಂಗ್ನಲ್ಲಿ ಚಹಾಲ್, ಸಿರಾಜ್ ಮತ್ತು ಹರ್ಷಲ್ ಪಟೇಲ್ ಅತ್ಯುತ್ತಮ ಪ್ರದರ್ಶನ ತೋರಿ ಸತತ 3 ಪಂದ್ಯಗಳಲ್ಲಿ ಗೆಲ್ಲಲು ಆರ್ಸಿಬಿಗೆ ನೆರವಾಗಿದ್ದಾರೆ. ಹಾಗಾಗಿ ಇಂದಿನ ಪಂದ್ಯಗಳಲ್ಲಿ ಆರ್ಸಿಬಿ ಹೆಚ್ಚಿನ ಬದಲಾವಣೆಗಳಿಲ್ಲದೆ ಕಣಕ್ಕಿಳಿಯುವ ಸಾಧ್ಯತೆಯಿದೆ.
ಇನ್ನು ಈಗಾಗಲೇ ಲೀಗ್ನಿಂದ ಹೊರಬಿದ್ದಿರುವ ಹೈದರಾಬಾದ್ ತಂಡಕ್ಕೆ ಈ ಪಂದ್ಯವನ್ನು ಗೆದ್ದರೂ - ಸೋತರೂ ಕೊನೆಯ ಸ್ಥಾನದಿಂದ ಮೇಲೇರಲು ಸಹಾ ನೆರವಾಗುವುದಿಲ್ಲ. ಹಾಗಾಗಿ ಫ್ರಾಂಚೈಸಿ ಬೆಂಚ್ ಕಾದಿರುವ ಆಟಗಾರರಿಗೆ ಅವಕಾಶ ನೀಡಿ ಅವರ ಪ್ರತಿಭೆ ಅನಾವರಣ ಮಾಡುವ ಉದ್ದೇಶವನ್ನು ಮಾತ್ರ ಹೊಂದಿದೆ.