ಮುಂಬೈ: ಯಾವುದೇ ಒಬ್ಬ ಕ್ರಿಕೆಟಿಗ ಯಶಸ್ವಿಯಾಗಬೇಕೆಂದರೆ ಟೆಸ್ಟ್ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರಬೇಕು ಎಂದು ಬಿಸಿಸಿಐ ಅಧ್ಯಕ್ಷ ಹಾಗೂ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ಕ್ರಿಕೆಟ್ನಲ್ಲಿ ಟೆಸ್ಟ್ ಏಕೆ ಅತ್ಯುತ್ತಮ ಸ್ವರೂಪ ಮತ್ತು ಜನರು ದೀರ್ಘ ಮಾದರಿಯಲ್ಲಿ ರನ್ಗಳಿಸಿದವರನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂಬುವುದನ್ನು ತಮ್ಮ ಮಾತುಗಳಲ್ಲಿ ವಿವರಿಸಿದ್ದಾರೆ.
ನಾನು ಚಿಕ್ಕವನಿದ್ದಾಗ ಕ್ರಿಕೆಟ್ ಆಡಲು ಶುರು ಮಾಡಿದಾಗ, ಟೆಸ್ಟ್ ಕ್ರಿಕೆಟ್ ಅಂತಿಮ ಸ್ವರೂಪವಾಗಿತ್ತು. ನಾನು ಈಗಲೂ ಅದನ್ನೇ ಸರ್ವಶ್ರೇಷ್ಠ ಕ್ರಿಕೆಟ್ ಎಂದು ಭಾವಿಸುತ್ತೇನೆ. ಅದಕ್ಕೆ ಇದನ್ನು 'ಟೆಸ್ಟ್' ಕ್ರಿಕೆಟ್ ಎಂದು ಕರೆಯುತ್ತಾರೆ ಎಂದು ಸ್ಟಾರ್ ಸ್ಪೋರ್ಟ್ಸ್ಗೆ ನೀಡಿದ ಸಂದರ್ಶನದಲ್ಲಿ ಗಂಗೂಲಿ ಹೇಳಿದ್ದಾರೆ.
" ಯಾವುದೇ ಒಬ್ಬ ಕ್ರಿಕೆಟರ್ ಆತ/ಅವಳು ಆಟದಲ್ಲಿ ಯಶಸ್ವಿಯಾಗಬೇಕಾದರೆ ಅಥವಾ ತಮ್ಮ ಚಾಪನ್ನು ಮೂಡಿಸಬೇಕಾದರೆ ಟೆಸ್ಟ್ ಕ್ರಿಕೆಟ್ ಒಂದು ದೊಡ್ಡ ವೇದಿಕೆಯಾಗಿದೆ. ಇಲ್ಲಿ ಚೆನ್ನಾಗಿ ಆಡಿದವರು ಮತ್ತು ರನ್ಗಳಿಸುತ್ತಾರೋ ಅವರನ್ನು ಜನರು ಸದಾಕಾಲ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ನೀವು 40-50 ವರ್ಷಗಳ ಹಿಂದಿನ ಕ್ರಿಕೆಟ್ನ ಎಲ್ಲ ದೊಡ್ಡ ಹೆಸರುಗಳನ್ನು ನೋಡಿ, ಅವರೆಲ್ಲರೂ ಅತ್ಯುತ್ತಮ ಟೆಸ್ಟ್ ದಾಖಲೆಗಳನ್ನು ಹೊಂದಿದ್ದಾರೆ " ಎಂದು ದಾದಾ ತಿಳಿಸಿದ್ದಾರೆ.