ಅಹಮದಾಬಾದ್ (ಗುಜರಾತ್): ವಿಶ್ವಕಪ್ ಪಂದ್ಯಗಳಲ್ಲಿ ಭಾರತ ಎಲ್ಲ ಪಂದ್ಯಗಳನ್ನು ಗೆದ್ದಿದೆ. ಈ ಗೆಲುವಿನ ಹಿಂದೆ ಆಟಗಾರರ ಶ್ರಮ, ಅವರ ಆಟ ಎಲ್ಲರಿಗೂ ಕಾಣುತ್ತದೆ. ಆದರೆ ಕೆಲವರು ತಂಡದ ಗೆಲುವಿಗಾಗಿ ಪಿಚ್ಗಳನ್ನು ತಮಗೆ ಬೇಕಾದಂತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಗಳನ್ನು ಮಾಡಿದ್ದಾರೆ. ಇದಲ್ಲದೇ ಭಾರತದ ಆಟಗಾರರಿಗೆ ಬೇರೆಯೇ ಬಾಲ್ ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಈ ಎಲ್ಲ ಆರೋಪಗಳ ಬಗ್ಗೆ ಆಟಗಾರರು ತಲೆಕೆಡಿಸಿಕೊಳ್ಳುವುದಿಲ್ಲ. ಸೆಮೀಸ್ ಪಂದ್ಯದ ವೇಳೆಯೂ ಪಿಚ್ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು, ಆದರೆ, ಈ ಬಗ್ಗೆ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಸ್ಪಷ್ಟನೆ ನೀಡಿದ್ದರು. ಭಾರತ ಉತ್ತಮವಾಗಿ ಆಡಿ ಗೆದ್ದಿದೆ. ಪಿಚ್ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ತಿಳಿಸಿದ್ದರು.
ಈಗ ಫೈನಲ್ ಪಂದ್ಯಕ್ಕೂ ಒಂದು ದಿನ ಮೊದಲು ಮೈದಾನಕ್ಕೆ ಬಂದಿದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ತಮ್ಮ ಮೊಬೈಲ್ನಲ್ಲಿ ಪಿಚ್ನ ಫೋಟೋ ಕ್ಲಿಕ್ಕಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ನಾಳೆ ಪಂದ್ಯದ ವೇಳೆ ಪಿಚ್ ಬದಲಾಗಿದ್ದಲ್ಲಿ ಸಾಕ್ಷಿಗಾಗಿ ಫೋಟೋ ತೆಗೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಂಜಾನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಮಿನ್ಸ್, "ಎದುರಾಳಿಯಿಂದ ಬರುವ ಪ್ರತಿಯೊಂದು ಬಾಲ್ ಎದುರಿಸಲು ಸಿದ್ಧರಾಗಿದ್ದೇವೆ. ನಮ್ಮ ಬಳಿಯೂ ಅಗತ್ಯ ಯೋಜನೆಗಳಿವೆ. ಅವುಗಳನ್ನು ನಾಳೆ ಮೈದಾನದಲ್ಲಿ ಪ್ರಯೋಗಿಸಿ ಯಶಸ್ಸು ಕಾಣಲು ಚಿಂತಿಸುತ್ತೇವೆ" ಎಂದು ವಿಶ್ವಾಸದಲ್ಲೇ ಉತ್ತರಿಸಿದ್ದರು.
ಐಸಿಸಿ ಅಧಿಕಾರಿಗಳಿಂದ ಪಿಚ್ ಪರೀಕ್ಷೆ: ವಿಶ್ವಕಪ್ನ ಪ್ರತಿ ಪಂದ್ಯಗಳ ಮೈದಾನ ಮತ್ತು ಪಿಚ್ಗಳನ್ನು ಐಸಿಸಿಯ ಅಧಿಕಾರಿಗಳು ವೀಕ್ಷಿಸುತ್ತಾರೆ. ಪಂದ್ಯದ ನಂತರ ತಂಡಗಳ ಪ್ರದರ್ಶನದ ಆಧಾರದ ಮೇಲೆ ಪಿಚ್ ಮತ್ತು ಮೈದಾನಕ್ಕೆ ಅಧಿಕಾರಿಗಳು ಅಂಕವನ್ನು ನೀಡುತ್ತಾರೆ. ಐಸಿಸಿ ಈ ಎಲ್ಲಾ ಕ್ರಮಗಳನ್ನು ಅನುಸರಿಸುತ್ತಿದ್ದರೂ, ಬಿಸಿಸಿಐಯ ಹಸ್ತಕ್ಷೇಪದ ಬಗ್ಗೆ ಆರೋಪಗಳು ಕೇಳಿ ಬರುತ್ತಲೇ ಇದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ಗೆ ಭಾರತದ ಪಿಚ್ ಆಯ್ಕೆಯಲ್ಲಿ ಬಿಸಿಸಿಐ ಮಧ್ಯಪ್ರವೇಶಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು.
2003ರ ವಿಶ್ವಕಪ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡ ಫೈನಲ್ನಲ್ಲಿ ಮುಖಾಮುಖಿ ಆಗಿತ್ತು. ಅಂದು ಭಾರತ ಸೋಲನುಭವಿಸಿತ್ತು. 20 ವರ್ಷದ ನಂತರ ಒಂದೇ ವೇದಿಕೆಯಲ್ಲಿ ಉಭಯ ತಂಡಗಳು ಮುಖಾಮುಖಿ ಆಗುತ್ತಿದೆ. 2003ರ ವಿಶ್ವಕಪ್ ಫೈನಲ್ ಮುಖಾಮುಖಿಯ ಸಮಯದಲ್ಲಿ ಭಾರತ 8 ಪಂದ್ಯ ಗೆದ್ದಿತ್ತು ಮತ್ತು ಆಸ್ಟ್ರೇಲಿಯಾ 10 ಪಂದ್ಯಗಳನ್ನು ಗೆದ್ದಿತ್ತು. 2023ರಲ್ಲಿ ಈ ಅಂಕಿ - ಅಂಶ ತದ್ವಿರುದ್ಧ ಆಗಿದೆ.
ಇದನ್ನೂ ಓದಿ:ವಿರಾಟ್ ಶ್ರೇಷ್ಠ ಕ್ರಿಕೆಟರ್, ರೋಹಿತ್ ವಿಶ್ವಕಪ್ ಬೆಸ್ಟ್ ಪ್ಲೇಯರ್: ದಿಗ್ಗಜ ಗುಂಡಪ್ಪ ವಿಶ್ವನಾಥ್