ಲಾಹೋರ್ (ಪಾಕಿಸ್ತಾನ): ಪಾಕಿಸ್ತಾನ ತಂಡ ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ ಕ್ರಿಕೆಟ್ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಶ್ರೀಲಂಕಾದಲ್ಲಿ ಆಡುತ್ತಿದೆ. ಸರಣಿಯ ಎರಡನೇ ಪಂದ್ಯವನ್ನು ನಿನ್ನೆ (ಗುರುವಾರ) 1 ವಿಕೆಟ್ನಿಂದ ರೋಚಕವಾಗಿ ಗೆದ್ದು ಬೀಗಿದೆ. ಪಾಕ್ ಈ ಮೂಲಕ ಸರಣಿಯಲ್ಲಿ 2-0ಯಿಂದ ಮುನ್ನಡೆ ಕಂಡಿದೆ. ನಾಳೆ (ಆಗಸ್ಟ್ 26) ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದಲ್ಲಿ ಐಸಿಸಿ ಏಕದಿನ ತಂಡದ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾವನ್ನು ಕೆಳಗಿಳಿಸಿ ಅಗ್ರಸ್ಥಾನ ಅಲಂಕರಿಸುತ್ತದೆ.
ಮುಂದೆ ನಡೆಯಲಿರುವ ಏಷ್ಯಾಕಪ್ ಮತ್ತು ವಿಶ್ವಕಪ್ಗೂ ಮುನ್ನ ಪಾಕ್ ತಂಡಕ್ಕೆ ಇದು ಪ್ಲಸ್ ಪಾಯಿಂಟ್ ಆಗಲಿದೆ. ಇದಕ್ಕಾಗಿ ಅಫ್ಘಾನಿಸ್ತಾನವನ್ನು ಮೂರನೇ ಪಂದ್ಯದಲ್ಲಿ ಮಣಿಸುವ ಲೆಕ್ಕಾಚಾರ ಬಾಬರ್ ಪಡೆಯದ್ದು. ಸದ್ಯ ಐಸಿಸಿ ರ್ಯಾಂಕಿಂಗ್ನಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳು ಕ್ರಮವಾಗಿ 23 ಮತ್ತು 22 ಪಂದ್ಯಗಳಿಂದ 118 ಅಂಕಗಳನ್ನು ಹೊಂದಿದ್ದು, ಒಂದು ಹಾಗೂ ಎರಡನೇ ಸ್ಥಾನದಲ್ಲಿವೆ. ಭಾರತವು ಮೂರನೇ ಮತ್ತು ನ್ಯೂಜಿಲೆಂಡ್, ಇಂಗ್ಲೆಂಡ್ ನಾಲ್ಕು, ಐದರಲ್ಲಿವೆ.
ಏಷ್ಯಾಕಪ್ನಲ್ಲಿ ಏಷ್ಯಾ ರಾಷ್ಟ್ರಗಳ ನಡುವೆ ಶ್ರೇಯಾಂಕದ ಪೈಪೋಟಿ ಜೋರಾಗಿಯೇ ನಡೆಯಲಿದೆ. ಮೂರನೇ ಸ್ಥಾನದಲ್ಲಿರುವ ಭಾರತ 113 ಅಂಕಗಳನ್ನು ಪಡೆದಿದೆ. ಏಷ್ಯಕಪ್ನಲ್ಲಿ ಭರ್ಜರಿ ಆಟ ಪ್ರದರ್ಶಿಸಿದರೆ ಸ್ಥಾನದಲ್ಲಿ ಮೇಲೇರುವ ಸಾಧ್ಯತೆ ಇದೆ. ಇದರ ಜೊತೆಗೆ, ಭಾರತ ತವರಿನಲ್ಲಿ ವಿಶ್ವಕಪ್ಗೂ ಮುನ್ನ ಆಸ್ಟ್ರೇಲಿಯಾದ ಜೊತೆಗೂ ಏಕದಿನ ಪಂದ್ಯಗಳನ್ನು ಆಡಲಿದೆ. ಏಷ್ಯಾಕಪ್ನಲ್ಲಿ ಭಾರತ ಸಪ್ಟೆಂಬರ್ 2ರಂದು ಪಾಕಿಸ್ತಾನದ ಜೊತೆಗೆ ಮತ್ತು 4 ರಂದು ನೇಪಾಳ ಜೊತೆಗೆ ಪಂದ್ಯ ಆಡಲಿದೆ. ನಂತರ ಸೂಪರ್ ಫೋರ್ ಹಂತದ ಪಂದ್ಯಗಳು ನಡೆಯುತ್ತವೆ.