ಇಸ್ಲಾಮಾಬಾದ್ (ಪಾಕಿಸ್ತಾನ): ಈ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಪ್ರಾರಂಭವಾಗುವ 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ದೇಶದ ಭಾಗವಹಿಸುವಿಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಪಾಕಿಸ್ತಾನ ಸರ್ಕಾರವು ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ - ಜರ್ದಾರಿ ನೇತೃತ್ವದ ಉನ್ನತ ಸಮಿತಿಯನ್ನು ರಚಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಭಾರತಕ್ಕೆ ರಾಷ್ಟ್ರೀಯ ತಂಡವನ್ನು ಕಳುಹಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಪ್ರಧಾನಿ ಶೆಹಬಾಜ್ ಷರೀಫ್ ಅವರು ಸಮಿತಿಯನ್ನು ರಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಗಳಲ್ಲಿ ಭಾಗವಹಿಸಲು ಪಾಕಿಸ್ತಾನದ ಕ್ರಿಕೆಟ್ ಆಡಳಿತ ಮಂಡಳಿ ಅನುಮತಿ ಕೋರಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಐಸಿಸಿ ವಿಶ್ವಕಪ್ನ ವೇಳಾಪಟ್ಟಿಯನ್ನು ಪ್ರಕಟಿಸಿದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸರ್ಕಾರಕ್ಕೆ ಮನವಿ ಪತ್ರವನ್ನು ಬರೆದಿತ್ತು. ಅದರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ರಾಜತಾಂತ್ರಿಕೆ ಸಮಸ್ಯೆಗಳಿರುವುದರಿಂದ ಸರ್ಕಾರ ಅನುಮತಿಯ ನಂತರವೇ ತಂಡವನ್ನು ವಿಶ್ವಕಪ್ಗೆ ಭಾರತಕ್ಕೆ ಕಳಿಸುವುದಾಗಿ ಹೇಳಲಾಗಿತ್ತು.
ಬಿಲಾವಲ್ ಅವರಲ್ಲದೇ, ಸಮಿತಿಯು ಆಂತರಿಕ ಸಚಿವ ರಾಣಾ ಸನಾವುಲ್ಲಾ, ಕಾನೂನು ಸಚಿವ ಅಜಮ್ ನಜೀರ್ ತರಾರ್, ವಾರ್ತಾ ಸಚಿವ ಮರಿಯುಮ್ ಔರಂಗಜೇಬ್, ಅಂತರ - ಪ್ರಾಂತೀಯ ಸಮನ್ವಯ ಸಚಿವ ಎಹ್ಸಾನ್-ಉರ್-ರೆಹಮಾನ್ ಮಜಾರಿ, ರಾಷ್ಟ್ರೀಯ ಭದ್ರತಾ ಸಂಸ್ಥೆಗಳ ಮುಖ್ಯಸ್ಥರು ಮತ್ತು ವಿದೇಶಾಂಗ ಕಾರ್ಯದರ್ಶಿಯನ್ನು ಒಳಗೊಂಡಿದೆ.
ಜೂನ್ 27 ರಂದು ಐಸಿಸಿ ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ, ಅಕ್ಟೋಬರ್ 6 ರಂದು ಪಾಕಿಸ್ತಾನ ಕ್ವಾಲಿಫೈಯರ್ 1 (ಶ್ರೀಲಂಕಾ) ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ ಮತ್ತು ಅಕ್ಟೋಬರ್ 15 ರಂದು ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತವನ್ನು ಎದುರಿಸಲಿದೆ.