ಕರ್ನಾಟಕ

karnataka

ETV Bharat / sports

Piloo Reporter: ಮೊದಲ ತಟಸ್ಥ ಅಂಪೈರ್​ ಪಿಲೂ ರಿಪೋರ್ಟರ್ ನಿಧನ - ETV Bharath Kannada news

Piloo Reporter dies at 84: ಮೊದಲ ನ್ಯೂಟ್ರಲ್ ಅಂಪೈರ್‌ ಆಗಿ ಕಾರ್ಯನಿರ್ವಹಿಸಿದ ಪಿಲೂ ರಿಪೋರ್ಟರ್ ಮುಂಬೈನಲ್ಲಿ ಇಂದು ನಿಧನರಾಗಿದ್ದಾರೆ.

Piloo Reporter
Piloo Reporter

By ETV Bharat Karnataka Team

Published : Sep 3, 2023, 6:59 PM IST

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಇಬ್ಬರು ನ್ಯೂಟ್ರಲ್ ಅಂಪೈರ್‌ಗಳಲ್ಲಿ ಒಬ್ಬರಾದ ಪಿಲೂ ರಿಪೋರ್ಟರ್ ಅವರು ಅನಾರೋಗ್ಯದ ಕಾರಣ ಮುಂಬೈನಲ್ಲಿ ಭಾನುವಾರ ನಿಧನರಾದರು. 84 ವರ್ಷ ವಯಸ್ಸಿನ ಪಿಲೂ ರಿಪೋರ್ಟರ್ ಸೆರೆಬ್ರಲ್ ಕಂಟ್ಯೂಷನ್ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಪತ್ನಿ ಮತ್ತು ಫರ್ಜಾನಾ ವಾರ್ಡನ್, ಖುಷ್ನುಮಾ ದಾರುವಾಲಾ ಎಂಬ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಪಿಲೂ ರಿಪೋರ್ಟರ್ 28 ವರ್ಷದ ವೃತ್ತಿ ಜೀವನದಲ್ಲಿ 14 ಟೆಸ್ಟ್ ಪಂದ್ಯಗಳು ಮತ್ತು 22 ಏಕದಿನ ಪಂದ್ಯಗಳಿಗೆ ಅಂಪೈರ್​ ಆಗಿ ಕೆಲಸ ಮಾಡಿದ್ದಾರೆ. 13 ಪ್ರಥಮ ದರ್ಜೆ ಕ್ರಿಕೆಟ್​ಗೆ ಕಾರ್ಯ ನಿರ್ವಹಿಸಿದ್ದಾರೆ. ಡಿಸೆಂಬರ್ 1984 ರಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ದೆಹಲಿ ಟೆಸ್ಟ್ ಅವರ ಪ್ರಥಮ ಪಂದ್ಯವಾಗಿದೆ. ಫೆಬ್ರವರಿ 1993 ರಲ್ಲಿ ಈ ಎರಡು ತಂಡಗಳ ನಡುವಿನ ಮುಂಬೈ ಟೆಸ್ಟ್‌ನಲ್ಲಿ ಕೊನೆಯ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ ಅಂಪೈರ್​ ಆಗಿ ಕಾಣಿಸಿಕೊಂಡರು.

1986ರಲ್ಲಿ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವೆ ಲಾಹೋರ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ತಟಸ್ಥ ಅಂಪೈರ್​ ಆಗಿ ಕಾರ್ಯನಿರ್ವಹಿಸಿದ ಹೆಮ್ಮೆ ಇವರದು. ಅಂದಿನ ಪಂದ್ಯಕ್ಕೆ ಪಾಕಿಸ್ತಾನದ ನಾಯಕ ಇಮ್ರಾನ್​ ಖಾನ್​, ಪಿಲೂ ರಿಪೋರ್ಟರ್ ಮತ್ತು ವಿಕೆ ರಾಮಸ್ವಾಮಿ ಅವರನ್ನು ತಟಸ್ಥ ಅಂಪೈರ್​ ಆಗಿ ಕಾರ್ಯನಿರ್ವಹಿಸುವಂತೆ ಕೇಳಿಕೊಂಡಿದ್ದರು. ಮೊದಲ ತಟಸ್ಥ ಅಂಪೈರಿಂಗ್​ ಮಾಡಿದ್ದು ಈ ಜೋಡಿಯಾಗಿದೆ. 1992ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ ಜಂಟಿಯಾಗಿ ಆಯೋಜಿಸಿದ್ದ ಏಕದಿನ ವಿಶ್ವಕಪ್​ನ ಪಂದ್ಯದ ಅಂಪೈರ್ ಆಗಿದ್ದರು.

ಭಾರತದ ಮಾಜಿ ಆಟಗಾರ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್​ಸಿಎ) ಅಧ್ಯಕ್ಷ ವಿವಿಎಸ್ ಲಕ್ಷ್ಮಣ್ ಎಕ್ಸ್​ ಖಾತೆ (ಹಿಂದಿನ ಟ್ವಿಟ್ಟರ್​​) ಸಂತಾಪ ಸೂಚಿಸಿದ್ದಾರೆ. "ತಟಸ್ಥ ಅಂಪೈರ್‌ಗಳಲ್ಲಿ ಮೊದಲಿಗರಾದ ಪಿಲೂ ರಿಪೋರ್ಟರ್ ಅವರ ನಿಧನದ ಬಗ್ಗೆ ಕೇಳಲು ದುಃಖವಾಗಿದೆ. ಅವರ ವಿಭಿನ್ನ ಬೌಂಡರಿ ಸಿಗ್ನಲ್‌ಗಳು ಇಂದಿಗೂ ನೆನಪಾಗುತ್ತವೆ." ಎಂದು ಬರೆದುಕೊಂಡಿದ್ದಾರೆ.

ಭಾರತದ ಮಾಜಿ ಆರಂಭಿಕ ಬ್ಯಾಟರ್ ವಿರೇಂದ್ರ ಸೆಹ್ವಾಗ್​ ಸಹ ಎಕ್ಸ್​ ಆ್ಯಪ್​ನಲ್ಲಿ ಸಂತಾಪ ಸೂಚಿಸಿದ್ದಾರೆ," #PilooReporter ಅವರ ನಿಧನದ ಬಗ್ಗೆ ಕೇಳಿದೆ. ಅವರ ಮಿಲ್ಕ್‌ಶೇಕ್ ಬೌಂಡರಿ ಸಿಗ್ನಲ್ ತುಂಬಾ ಆಕರ್ಷಕವಾಗಿತ್ತು. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳನ್ನು ತಿಳಿಸುತ್ತೇನೆ. ಕಾಕತಾಳೀಯವಾಗಿ, ಹೀತ್ ಸ್ಟ್ರೀಕ್ ಅವರ ಚೊಚ್ಚಲ ಏಕದಿನ ಪಂದ್ಯದ ಸಮಯದಲ್ಲಿ ಪಿಲೋ ಅಂಪೈರ್ ಆಗಿದ್ದರು. ದೇವರು ಅವರ ಕುಟುಂಬಕ್ಕೆ ಧೈರ್ಯ ಮತ್ತು ಶಕ್ತಿಯನ್ನು ನೀಡಲಿ" ಎಂದು ಬರೆದುಕೊಂಡಿದ್ದಾರೆ.

ಇಂದು ವಿಶ್ವ ಕ್ರಿಕೆಟ್​ ಎರಡು ವಿಶೇಷ ವ್ಯಕ್ತಿಗಳ ನಿಧನವಾಗಿದೆ. ಜಿಂಬಾಬ್ವೆ ಮಾಜಿ ನಾಯಕ ಹೀತ್ ಸ್ಟ್ರೀಕ್ ಕ್ಯಾನ್ಸರ್​ನಿಂದ ಇಂದು ಮುಂಜಾನೆ ನಿಧನರಾದರು.

ಇದನ್ನೂ ಓದಿ:Heath Streak: ಕ್ಯಾನ್ಸರ್​ನಿಂದ ಬಳಲುತ್ತಿದ್ದ ಜಿಂಬಾಬ್ವೆ ಕ್ರಿಕೆಟಿಗ ಹೀತ್ ಸ್ಟ್ರೀಕ್ ನಿಧನ

ABOUT THE AUTHOR

...view details