ಬಹುದಿನಗಳಿಂದ ಕ್ರೀಡಾಸಕ್ತರು ಕಾಯುತ್ತಿದ್ದ ಏಕದಿನ ವಿಶ್ವಕಪ್ನ ವೇಳಾಪಟ್ಟಿ ಈಗಾಗಲೇ ಪ್ರಕಟವಾಗಿದೆ. ಒಟ್ಟು 10 ತಂಡಗಳು ಭಾಗವಹಿಸಲಿದ್ದು, ಮೊದಲ ಎಂಟು ತಂಡಗಳು ಈಗಾಗಲೇ ಸೂಪರ್ ಲೀಗ್ ಮೂಲಕ ಅರ್ಹತೆ ಪಡೆದಿವೆ. ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ಅರ್ಹತಾ ಪಂದ್ಯಗಳ ಮೂಲಕ ಇನ್ನೆರಡು ತಂಡಗಳು ಸೇರಲಿವೆ. ಅರ್ಹತಾ ಪಂದ್ಯದ ಫೈನಲ್ ಜುಲೈ 9ರಂದು ಮುಕ್ತಾಯಗೊಳ್ಳಲಿದೆ.
ನಿನ್ನೆಯವರೆಗೆ ಅರ್ಹತಾ ಸುತ್ತಿನ ಗುಂಪು ಪಂದ್ಯಗಳು ನಡೆದಿದ್ದು, 4 ತಂಡಗಳು ಹೊರಗುಳಿದಿವೆ. ನಾಳೆಯಿಂದ ಸೂಪರ್ ಸಿಕ್ಸ್ ರೌಂಡ್ ಆರಂಭವಾಗಲಿದೆ. ಎ ಗುಂಪಿನಿಂದ ಜಿಂಬಾಬ್ವೆ, ನೆದರ್‌ಲ್ಯಾಂಡ್ಸ್ ಮತ್ತು ವೆಸ್ಟ್ ಇಂಡೀಸ್ ಮತ್ತು ಬಿ ಗುಂಪಿನಿಂದ ಓಮನ್, ಶ್ರೀಲಂಕಾ ಮತ್ತು ಸ್ಕಾಟ್‌ಲ್ಯಾಂಡ್ ತಂಡಗಳು ಸೂಪರ್ ಸಿಕ್ಸ್ನಲ್ಲಿ ವಿಶ್ವಕಪ್ ಆಯ್ಕೆಗಾಗಿ ಪೈಪೋಟಿ ನಡೆಸಲಿವೆ. ಏಕದಿನ ವಿಶ್ವಕಪ್ ಕ್ವಾಲಿಫೈಯರ್ಸ್ 2023 ಪಂದ್ಯಾವಳಿಯ ಸೂಪರ್ ಸಿಕ್ಸಸ್ ಹಂತದ ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ಓಮನ್ ವಿರುದ್ಧ ಆಡಲಿದೆ.
ಗುಂಪು ಹಂತದಲ್ಲಿ ಪ್ರತಿ ತಂಡ ನಾಲ್ಕು ಪಂದ್ಯಗಳನ್ನು ಆಡಿದೆ. ಇದರಲ್ಲಿ ಎ ಗುಂಪಿನ 1 ಪಂದ್ಯ ಗೆದ್ದ ನೇಪಾಳ, ಒಂದನ್ನೂ ಗೆಲ್ಲದ ಯುನೈಟೆಡ್ ಸ್ಟೇಟ್ಸ್ ಮತ್ತು ಬಿ ಗುಂಪಿನ ಒಂದು ಗೆಲುವು ಕಂಡ ಐರ್ಲೆಂಡ್, ಗೆಲುವೇ ಕಾಣದ ಯುಎಇ ಹೊರಗುಳಿದಿವೆ. ಗುಂಪು ಹಂತದಲ್ಲಿ ಜಿಂಬಾಬ್ವೆ ಮತ್ತು ಶ್ರೀಲಂಕಾ ಸೋಲೇ ಕಾಣದೇ ವಿಶ್ವಕಪ್ ಕ್ವಾಲಿಫೈಯರ್ಸ್ ಹಂತಕ್ಕೆ ತಲುಪಿದ್ದಾರೆ.
ವಿಶ್ವಕಪ್ ಕ್ವಾಲಿಫೈಯರ್ಸ್ ಅಂಕಪಟ್ಟಿಯಲ್ಲಿ ಈಗಾಗಲೇ ಶ್ರೀಲಂಕಾ ಮತ್ತು ಜಿಂಬಾಬ್ವೆ 2 ಪಂದ್ಯದಲ್ಲಿ ಎರಡನ್ನು ಗೆದ್ದು ನಾಲ್ಕು ಅಂಕದಿಂದ ಕ್ರಮವಾಗಿ ಒಂದು, ಎರಡು ಸ್ಥಾನವನ್ನು ಅಲಂಕರಿಸಿದೆ. ಸ್ಕಾಟ್‌ಲ್ಯಾಂಡ್ ಮತ್ತು ನೆದರ್‌ಲ್ಯಾಂಡ್ಸ್ ಒಂದೊಂದು ಪಂದ್ಯ ಗೆದ್ದು ಮೂರು, ನಾಲ್ಕನೇ ಸ್ಥಾನದಲ್ಲಿವೆ. ವೆಸ್ಟ್ ಇಂಡೀಸ್ ಮತ್ತು ಒಮನ್ಗೆ ಸೂಪರ್ ಸಿಕ್ಸ್ ಹಂತದ ಎಲ್ಲ ಮೂರು ಪಂದ್ಯಗಳ ಗೆಲುವು ಅತ್ಯಂತ ಮುಖ್ಯವಾಗಿದೆ.
ಪ್ರಮುಖವಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಲಿಷ್ಠ ತಂಡವಾಗಿದ್ದ ವೆಸ್ಟ್ ಇಂಡೀಸ್ಗೆ ವಿಶ್ವಕಪ್ ಕ್ವಾಲಿಫೈಯರ್ಸ್‌ನ ಪ್ರತಿ ಪಂದ್ಯವನ್ನೂ ಗೆಲ್ಲುವ ಅಗತ್ಯವಿದೆ. ಈ ಬಾರಿಯ ಸ್ಪರ್ಧೆಯಲ್ಲಿ ಜಿಂಬಾಬ್ವೆ ಉತ್ತಮ ಪ್ರದರ್ಶನ ನೀಡಿ ಶ್ರೀಲಂಕಾದ ಜೊತೆಗೆ ವಿಶ್ವಕಪ್ನಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ. ನೆದರ್‌ಲ್ಯಾಂಡ್ಸ್ ಮತ್ತು ಸ್ಕಾಟ್‌ಲ್ಯಾಂಡ್ ಸಹ ಉತ್ತಮ ಗುಂಪು ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಮುಂದಿನ ವರ್ಷಗಳಲ್ಲಿ ಭರವಸೆಯ ತಂಡಗಳಾಗಿ ರೂಪುಗೊಳ್ಳುತ್ತಿವೆ.
2023ರ ಏಕದಿನ ವಿಶ್ವಕಪ್‌ಗೆ ಅರ್ಹತೆ ಹೇಗೆ?: ಸೂಪರ್ ಸಿಕ್ಸ್ ಹಂತದ ಕೊನೆಯಲ್ಲಿ ಅಗ್ರ ಎರಡು ತಂಡಗಳು ಏಕದಿನ ಅರ್ಹತಾ ಪಂದ್ಯಗಳ ಫೈನಲ್ ನಡೆಯುತ್ತದೆ. ಆದರೆ ಈ ಫೈನಲ್ ಪಂದ್ಯ ಕೇವಲ ಔಪಚಾರಿಕವಾಗಿರುತ್ತದೆ. ಅಗ್ರ ಸ್ಥಾನದಲ್ಲಿ ಇರುವ ಎರಡು ತಂಡಗಳು ಸ್ಪರ್ಧೆಗೆ ಆಯ್ಕೆ ಆದಂತೆ. ನೆದರ್‌ಲ್ಯಾಂಡ್ಸ್ ವಿರುದ್ಧದ ಸೂಪರ್ ಓವರ್‌ನಲ್ಲಿ ಸೋಲಿನ ನಂತರ ವೆಸ್ಟ್ ಇಂಡೀಸ್ ವಿಶ್ವಕಪ್ ಸ್ಥಾನ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ.
ಇದನ್ನೂ ಓದಿ:Cricket World Cup 2023: ಏಕದಿನ ವಿಶ್ವಕಪ್ ಕ್ರಿಕೆಟ್ನಲ್ಲಿ ಭಾರಿ ಕುತೂಹಲದ ಪಂದ್ಯಗಳು ಯಾವುವು ಗೊತ್ತೇ? ನೋಡಲು ಮಿಸ್ ಮಾಡದಿರಿ!