ಕ್ರೈಸ್ಟ್‌ಚರ್ಚ್ (ನ್ಯೂಜಿಲ್ಯಾಂಡ್ ):ಭಾರತ-ಆಸಿಸ್ ನಡುವೆ ಕೊನೆಯ ಟೆಸ್ಟ್ ಅಹಮದಾಬಾದ್ನಲ್ಲಿ ನಡೆಯುತ್ತಿದೆ, ಇದರಲ್ಲಿ ಗೆದ್ದರೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡುವುದು ಪಕ್ಕಾ ಆಗಲಿದೆ. ಭಾರತ ಸೋತಲ್ಲಿ ಶ್ರೀಲಂಕಾಗೆ ಫೈನಲ್ ಪ್ರವೇಶಕ್ಕೆ ಅವಕಾಶ ತೆರೆದುಕೊಳ್ಳಲಿದೆ. ಇದಕ್ಕಾಗಿ ನ್ಯೂಜಿಲ್ಯಾಂಡ್ನಲ್ಲೇ ಸಿಂಹಳೀಯರು ಕಿವೀಸ್ನ್ನು ಕ್ಲೀನ್ ಸ್ಪೀಪ್ ಮಾಡಬೇಕಿದೆ.
ನ್ಯೂಜಿಲ್ಯಾಂಡ್ ನಲ್ಲಿ ಶ್ರೀಲಂಕಾದ ಆಟಗಾರು ಮೊದಲೆರಡು ದಿನ ತಮ್ಮ ಹಿಡಿತವನ್ನು ಸಾಧಿಸಿದ್ದಾರೆ. ಟಾಸ್ ಗೆದ್ದು ಕಿವೀಸ್ ನಾಯಕ ಟೀಮ್ ಸೌಥಿ ಕ್ಷೇತ್ರ ರಕ್ಷಣೆ ಆಯ್ದುಕೊಂಡರು. ಲಂಕಾ ಬ್ಯಾಟರ್ಗಳು ಸೌಥಿ ಪಡೆಯ ಬೌಲಿಂಗ್ಗೆ ತಕ್ಕ ಉತ್ತರವನ್ನು ನೀಡಿ ಮೊದಲ ಇನ್ನಿಂಗ್ಸ್ಗೆ 355 ರನ್ ಗಳಿಸಿದರು. ಮೊದಲ ದಿನ ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ 305 ಗಳಿಸಿತ್ತು. ಇಂದು 17.4 ಓವರ್ ಆಡಿದ ಲಂಕಾ ನಿನ್ನೆಯ ಸ್ಕೋರ್ಗೆ 50 ಸೇರಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತು.
ಆರಂಭಿಕ ಓಶಾದ ಫೆರ್ನಾಂಡೊ 13ಕ್ಕೆ ಔಟ್ ಆದರು. ನಂತರ ನಾಯಕ ದಿಮುತ್ ಕರುಣಾರತ್ನೆ ಮತ್ತು ಕುಸಾಲ್ ಮೆಂಡಿಸ್ ತಂಡಕ್ಕೆ ಉತ್ತಮ ಜೊತೆಯಾಟ ನೀಡಿದರು. ನಾಯಕ ಜೊತೆ ಸೇರಿದ ಕುಸಾಲ್ ಮೆಂಡಿಸ್ ಬಿರುಸಿನ ಆಟ ಆಡಿ ಅರ್ಧಶತಕ ಗಳಿಸಿದರು. 83 ಎಸೆತಗಳನ್ನು ಎದುರಿಸಿದ ಅವರು 16 ಬೌಂಡರಿಯಿಂದ 87 ರನ್ ಗಳಿಸಿ ನಾಯಕ ಸೌಥಿಗೆ ವಿಕೆಟ್ ಒಪ್ಪಿಸಿರು. ಇವರ ಬೆನ್ನಲ್ಲೇ 50 ರನ್ ಗಳಿಸಿ ಆಡುತ್ತಿದ್ದ ಲಂಕಾ ಸಾರಥಿ ಕರುಣಾರತ್ನೆ ಮ್ಯಾಟ್ ಹೆನ್ರಿಗೆ ಔಟ್ ಆದರು.