ಕರ್ನಾಟಕ

karnataka

ETV Bharat / sports

T20I world cup: ಇಂಗ್ಲೆಂಡ್ ಮಣಿಸಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿದ ಕಿವೀಸ್​ - ಇಂಗ್ಲೆಂಡ್ vs ನ್ಯೂಜಿಲ್ಯಾಂಡ್ ಸೆಮಿಫೈನಲ್

ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್​ ತಂಡ 20 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 166 ರನ್​ಗಳಿಸಿತ್ತು. ಈ ಮೊತ್ತವನ್ನು ವಿಲಿಯಮ್ಸನ್​ ಬಳಗ 19 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು ತಲುಪುವ ಮೂಲಕ ಟಿ20 ಫೈನಲ್ ಪ್ರವೇಶಿಸಿತು.

New zealand beat England by 5 wickets, enter first t20I final
ಟಿ20 ವಿಶ್ವಕಪ್ 2021

By

Published : Nov 10, 2021, 11:16 PM IST

Updated : Nov 10, 2021, 11:57 PM IST

ಅಬುಧಾಬಿ: ಡೇರಿಲ್ ಮಿಚೆಲ್(72)​ ಅವರ ಅಜೇಯ ಅರ್ಧಶತಕದ ನೆರವಿನಿಂದ ನ್ಯೂಜಿಲ್ಯಾಂಡ್​ ತಂಡ ಸೆಮಿಫೈನಲ್​​ನಲ್ಲಿ ಇಂಗ್ಲೆಂಡ್ ವಿರುದ್ಧ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಐಸಿಸಿ ಟಿ20 ವಿಶ್ವಕಪ್​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೈನಲ್​ ಪ್ರವೇಶಿಸಿದೆ.

ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 167 ರನ್​ಗಳ ಸ್ಪರ್ಧಾತ್ಮಕ ಮೊತ್ತವನ್ನು ಕೇನ್​ ವಿಲಿಯಮ್ಸನ್​ ಬಳಗ ಇನ್ನು ಒಂದು ಓವರ್​ ಉಳಿದಿರುವಂತೆ 5 ವಿಕೆಟ್ ಕಳೆದುಕೊಂಡು ತಲುಪಿತು.

ಆರಂಭಿಕ ಆಘಾತ

ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಕಿವೀಸ್ ಪಡೆ ಕೇವಲ 13 ರನ್​ಗಳಾಗುವಷ್ಟರಲ್ಲಿ ಮಾರ್ಟಿನ್ ಗಪ್ಟಿಲ್​(4) ಮತ್ತು ನಾಯಕ ಕೇನ್​ ವಿಲಿಯಮ್ಸನ್​(5) ವಿಕೆಟ್​ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು.

ಆದರೆ ಈ ಹಂತದಲ್ಲಿ ಒಂದಾದ ಡೇರಿಲ್ ಮಿಚೆಲ್ ಮತ್ತು ಡೆವೋನ್ ಕಾನ್ವೆ 3ನೇ ವಿಕೆಟ್​ಗೆ 82 ರನ್​ ಜೊತೆಯಾಟ ನೀಡಿ ತಂಡವನ್ನು ಆಘಾತದಿಂದ ಪಾರು ಮಾಡಿದ್ದಲ್ಲದೆ, ತಂಡವನ್ನು ಸ್ಪರ್ಧೆಗೆ ತಂದರು. 38 ಎಸೆತಗಳಲ್ಲಿ 5 ಬೌಂಡರಿ, ಒಂದು ಸಿಕ್ಸರ್​ ಸಹಿತ 46 ರನ್​ಗಳಿಸಿದ್ದ ಕಾನ್ವೆ ಲಿವಿಂಗ್​ಸ್ಟೋನ್​ ಬೌಲಿಂಗ್​ನಲ್ಲಿ ಸ್ಟಂಪ್​ ಆದರು.

ಕಾನ್ವೆ ನಂತರ ಕ್ರೀಸ್​ಗೆ ಬಂದ ಗ್ಲೇನ್​ ಫಿಲಿಪ್ಸ್​ ಕೇವಲ 2 ರನ್​ಗಳಿಸಿ ಲವಿಂಗ್​ಸ್ಟೋನ್​ ಬೌಲಿಂಗ್​ನಲ್ಲಿ ಬಿಲ್ಲಿಂಗ್ಸ್​ಗೆ ಕ್ಯಾಚ್​ ನೀಡಿ ನಿರ್ಗಮಿಸಿದರು.

ಪಂದ್ಯದ ಗತಿ ಬದಲಿಸಿದ ಜೇಮ್ಸ್​ ನೀಶಮ್

ಫಿಲಿಪ್ಸ್ ವಿಕೆಟ್​ ಒಪ್ಪಿಸಿದ ಸಂದರ್ಭದಲ್ಲಿ ನ್ಯೂಜಿಲ್ಯಾಂಡ್​ 15.1 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 107 ರನ್​ಗಳಿಸಿತ್ತು. ಕಿವೀಸ್​ಗೆ ಗೆಲ್ಲಲು 29 ಎಸೆತಗಳಲ್ಲಿ 60 ರನ್​ಗಳ ಅಗತ್ಯವಿತ್ತು. ನೀಶಮ್ ಕೇವಲ 11 ಎಸೆತಗಳಲ್ಲಿ 3 ಸಿಕ್ಸರ್​ ಮತ್ತು ಒಂದು ಬೌಂಡರಿ ಸಹಿತ 27 ರನ್​ ಸಿಡಿಸಿ ಪಂದ್ಯದ ಗತಿಯನ್ನೇ ಬದಲಿಸಿದರು.

ಕೊನೆಯ 2 ಓವರ್​ಗಳಲ್ಲಿ ಕಿವೀಸ್​ಗೆ ಗೆಲ್ಲಲು 20 ರನ್​ಗಳ ಅಗತ್ಯವಿತ್ತು. ಕ್ರಿಸ್​ ವೋಕ್ಸ್​ ಎಸೆದ 19ನೇ ಓವರ್​ನಲ್ಲಿ ಡೇರಿಲ್ ಮಿಚೆಲ್ 2 ಸಿಕ್ಸರ್​ ಮತ್ತು 1 ಬೌಂಡರಿ ಸಹಿತ 20 ರನ್​ ಸೂರೆಗೈದು ಇನ್ನು ಒಂದು ಓವರ್​ ಬಾಕಿ ಉಳಿದಿರುವಂತೆ ಪಂದ್ಯವನ್ನು ಮುಗಿಸಿದರು.​

ಇಂಗ್ಲೆಂಡ್​ ಪರ ಲಿಯಾಮ್ ಲಿವಿಂಗ್​ಸ್ಟೋನ್ 22ಕ್ಕೆ2, ಕ್ರಿಸ್​ ವೋಕ್ಸ್​ 36ಕ್ಕೆ 2 ಹಾಗೂ ಆದಿಲ್ ರಶೀದ್​ 39ಕ್ಕೆ1 ವಿಕೆಟ್ ಪಡೆದರು.

ಇದಕ್ಕು ಮುನ್ನ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್​ ತಂಡ 20 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 166 ರನ್​ಗಳಿಸಿತ್ತು. ಜೋಶ್ ಬಟ್ಲರ್​ 29, ಜಾನಿ ಬೈರ್​ಸ್ಟೋವ್​ 13, ಡೇವಿಡ್ ಮಲನ್​ 41(30 ಎಸೆತ, 4 ಬೌಂಡರಿ 1ಸಿಕ್ಸರ್), ಮೊಯೀನ್ ಅಲಿ 51(37 ಎಸೆತ, 3 ಬೌಂಡರಿ 2 ಸಿಕ್ಸರ್​) ಹಾಗೂ ಲಿವಿಂಗ್​ಸ್ಟೋನ್​ ಅವರ 17 ರನ್​ಗಳಿಸಿ ಮಿಂಚಿದ್ದರು.

ನ್ಯೂಜಿಲ್ಯಾಂಡ್​ ಪರ ಸೌಥಿ 24ಕ್ಕೆ1, ಆ್ಯಡಂ ಮಿಲ್ನೆ 31ಕ್ಕೆ1, ಇಶ್ ಸೋಧಿ 32ಕ್ಕೆ1,ಹಾಗೂ ನೀಶಮ್​ 18ಕ್ಕೆ 1 ವಿಕೆಟ್​ ಪಡೆದಿದ್ದರು.

ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಕಿವೀಸ್​

2007ರ ಚೊಚ್ಚಲ ​ ಮತ್ತು 2016ರ ಟಿ20 ವಿಶ್ವಕಪ್​ನಲ್ಲಿ ಮಾತ್ರ ಸೆಮಿಫೈನಲ್​ ಪ್ರವೇಶಿಸಲು ಯಶಸ್ವಿಯಾಗಿದ್ದ ನ್ಯೂಜಿಲ್ಯಾಂಡ್ ತಂಡ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಸಿಸಿದೆ. 2009, 10,12, 14 ರ ಆವೃತ್ತಿಗಳಲ್ಲಿ 2ನೇ ಸುತ್ತಿನಲ್ಲಿ ಸೋತು ಹೊರಬಿದ್ದಿತ್ತು.

Last Updated : Nov 10, 2021, 11:57 PM IST

ABOUT THE AUTHOR

...view details