ಕೊಲಂಬೊ(ಶ್ರೀಲಂಕಾ): ಜುಲೈ 13ರಿಂದ ಆತಿಥೇಯ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ನಿಗದಿತ ಓವರ್ಗಳ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಲಿದೆ. ತಂಡಕ್ಕೆ ನಾಯಕನಾಗಿ ಶಿಖರ್ ಧವನ್ ಹಾಗೂ ಉಪನಾಯಕನಾಗಿ ಭುವನೇಶ್ವರ್ ಕುಮಾರ್ ಆಯ್ಕೆಯಾಗಿದ್ದು, ಕೋಚ್ ಜವಾಬ್ದಾರಿ ರಾಹುಲ್ ದ್ರಾವಿಡ್ಗೆ ನೀಡಲಾಗಿದೆ.
ಇದೇ ಮೊದಲ ಸಲ ರಾಹುಲ್ ದ್ರಾವಿಡ್ ಸೀನಿಯರ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ಆಟಗಾರರಿಂದಲೂ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅವರ ಬಗ್ಗೆ ಇದೀಗ ಭುವನೇಶ್ವರ್ ಕುಮಾರ್ ಮಾತನಾಡಿದ್ದು, ತಂಡದ ಕೋಚ್ ಆಗಿ ನೇಮಕಗೊಂಡಿರುವುದು ನಮ್ಮ ಅದೃಷ್ಟವಾಗಿದೆ. ದ್ರಾವಿಡ್ ಅವರ ತರಬೇತಿಯಡಿ ಆಟವಾಡಲು ಇಷ್ಟಪಡುತ್ತೇನೆ ಎಂದಿದ್ದಾರೆ.
ತಂಡದ ಉಪನಾಯಕನಾಗಿ ಆಯ್ಕೆಯಾಗಿರುವುದಕ್ಕೆ ಸಂತಸವಿದೆ. ರಾಹುಲ್ ದ್ರಾವಿಡ್ ಎಲ್ಲ ರೀತಿಯ ಒತ್ತಡವನ್ನ ಸುಲಭವಾಗಿ ನಿರ್ವಹಿಸುತ್ತಾರೆ. ಅವರು(ರಾಹುಲ್ ದ್ರಾವಿಡ್) ಆರ್ಸಿಬಿ ತಂಡದಲ್ಲಿದ್ದ ಸಂದರ್ಭದಲ್ಲಿ ನಾನು ಎದುರಾಳಿ ತಂಡದ ಆಟಗಾರನಾಗಿ ಆಡಿದ್ದೇನೆ. ಅವರೊಂದಿಗೆ ಹೆಚ್ಚಿನ ಒಡನಾಟ ಏನು ಇಲ್ಲ. ಆದರೆ, ರಾಷ್ಟ್ರೀಯ ಕ್ರಿಕೆಟ್ ಅಕ್ಯಾಡೆಮಿಯಲ್ಲಿ ಕೆಲವೊಂದು ಸಲ ಮುಖಾಮುಖಿಯಾಗಿದ್ದೇನೆ. ಆದರೆ, ಸದ್ಯ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ತರಬೇತಿ ನಿಜಕ್ಕೂ ಅದ್ಭುತವಾಗಿದೆ ಎಂದು ಭುವಿ ತಿಳಿಸಿದ್ದಾರೆ.