ಭಾರತ ಕ್ರಿಕೆಟ್ ತಂಡಕ್ಕೆ ಅನುಭವಿ ವೇಗಿ ಮಹಮ್ಮದ್ ಶಮಿ ಕಮ್‌ಬ್ಯಾಕ್ ಮತ್ತಷ್ಟು ವಿಳಂಬವಾಗುತ್ತಿದೆ. ಶಮಿ ಇದೀಗ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದು ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದಲೂ ಹೊರಗುಳಿಯಬೇಕಿದೆ. ಆಸೀಸ್ ವಿರುದ್ಧದ ಚುಟುಕು ಪಂದ್ಯಾವಳಿಗಳು ಸೆಪ್ಟೆಂಬರ್ 20 ರಿಂದ ಮೊಹಾಲಿಯಲ್ಲಿ ಆರಂಭವಾಗಲಿದೆ. ವರದಿಯ ಪ್ರಕಾರ, ಇವರ ಸ್ಥಾನಕ್ಕೆ ಮತ್ತೋರ್ವ ಅನುಭವಿ ಉಮೇಶ್ ಕುಮಾರ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ ಎಂದು ತಿಳಿದುಬಂದಿದೆ.
ತೊಡೆಸಂದು ನೋವಿನಿಂದ ಬಳಲುತ್ತಿದ್ದ ಉಮೇಶ್ ಯಾದವ್ ಇದೀಗ ಫಿಟ್ ಆಗಿದ್ದಾರೆ. ಇವರು 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಭಾರತ ತಂಡದ ಭಾಗವಾಗಿದ್ದರು. "ಮಹಮ್ಮದ್ ಶಮಿ ಅವರಿಗೆ ಕೋವಿಡ್-19 ಸೋಂಕು ಬಾಧಿಸಿದೆ. ಆದ್ರೆ ಸೌಮ್ಯ ಪ್ರಮಾಣದ ಲಕ್ಷಣಗಳಿದ್ದು, ಆತಂಕವಿಲ್ಲ. ಸದ್ಯಕ್ಕೆ ಅವರು ಐಸೊಲೇಷನ್‌ನಲ್ಲಿ ಇರಬೇಕಿದೆ. ವರದಿ ನೆಗೆಟಿವ್ ಬಂದ ನಂತರದಲ್ಲಿ ತಂಡ ಸೇರಿಕೊಳ್ಳುವರು" ಎಂದು ಬಿಸಿಸಿಐ ಅಧಿಕೃತ ಮೂಲಗಳು ತಿಳಿಸಿವೆ.