ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಆಶಸ್ ಸರಿಣಿಯ ಮೊದಲ ಟೆಸ್ಟ್ನ ಎಡರನೇ ದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಇಂಗ್ಲೆಂಡ್ ಆಟಗಾರ ಮೊಯಿನ್ ಅಲಿ ಅವರಿಗೆ ಪಂದ್ಯ ಶುಲ್ಕದ ಶೇಕಡಾ 25 ರಷ್ಟು ದಂಡ ವಿಧಿಸಲಾಗಿದೆ. ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಾಗಿ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.20 ಅನ್ನು ಅಲಿ ಉಲ್ಲಂಘಿಸಿರುವುದು ಕಂಡುಬಂದಿದ್ದು, ಇದು ಆಟದ ಮನೋಭಾವಕ್ಕೆ ವಿರುದ್ಧವಾದ ನಡವಳಿಕೆಯಾಗಿದೆ ಎಂದು ಐಸಿಸಿ ತಿಳಿಸಿದೆ.
ಮೊಯಿನ್ ಅಲಿ ಅವರ ಶಿಸ್ತಿನ ಅಂಶಕ್ಕೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸೇರಿಸಲಾಗಿದೆ, ಇದು 24 ತಿಂಗಳ ಅವಧಿಯಲ್ಲಿ ಅಲಿ ಮಾಡಿದ ಮೊದಲ ಅಪರಾಧ ಇದಾಗಿದೆ. ಈ ಘಟನೆ ಆಸ್ಟ್ರೇಲಿಯಾದ ಇನ್ನಿಂಗ್ಸ್‌ನ 89 ನೇ ಓವರ್‌ನಲ್ಲಿ ನಡೆದಿದೆ. ಅಲಿ ಅವರು ಮುಂದಿನ ಓವರ್ ಅನ್ನು ಬೌಲ್ ಮಾಡಲು ಬರುವ ಮೊದಲು ಬೌಂಡರಿ ಗೆರೆಯಲ್ಲಿ ತಮ್ಮ ಕೈಗೆ ಡ್ರೈಯಿಂಗ್ ಸ್ಪ್ರೇಯನ್ನು ಬಳಸಿದರು. ಆದರೆ ಆನ್ ಫೀಲ್ಡ್ ಅಂಪೈರ್ ಒಪ್ಪಿಗೆ ಇಲ್ಲದೇ ಇವುಗಳನ್ನು ಬಳಸುವಂತಿಲ್ಲ ಎಂದಿದೆ.
ಅಲಿ ಅಪರಾಧವನ್ನು ಒಪ್ಪಿಕೊಂಡಿದ್ದು, ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಪ್ರಸ್ತಾಪಿಸಿದ ದಂಡವನ್ನು ಅಲಿ ಒಪ್ಪಿಕೊಂಡಿದ್ದರಿಂದ ಔಪಚಾರಿಕ ವಿಚಾರಣೆಯ ನಡೆಸುವ ಅಗತ್ಯವಿಲ್ಲ ಎಂದು ಐಸಿಸಿ ತಿಳಿಸಿದೆ.
ಸ್ಪ್ರೇ ಅನ್ನು ಚೆಂಡಿನ ಮೇಲೆ ಬಳಸಿಲ್ಲ, ಕೇವಲ ಅವರ ಕೈಗಳಿಗೆ ಹಾಕಿಕೊಂಡಿದ್ದಾರೆ. ಅವರು ಬಾಲ್ಗೆ ಸ್ಪ್ರೇ ಬಳಸಿದ್ದಲ್ಲಿ ಐಸಿಸಿ ಆಟದ ಷರತ್ತುಗಳ ಅನ್ವಯ 41.3 ಅನ್ನು ಉಲ್ಲಂಘಿಸಿದಂತಾಗುತ್ತಿತ್ತು. ಪಂದ್ಯದ ಬಾಲ್ನ ಸ್ಥಿತಿ ಬದಲಾವಣೆಗೆ ಹೆಚ್ಚಿನ ದಂಡವನ್ನು ವಿಧಿಸಲಾಗುತ್ತದೆ. ಆದರೆ ಇಲ್ಲಿ ಅಲಿ ಕೇವಲ ಕೈಗಳಿಗೆ ಮಾತ್ರ ಸ್ಪ್ರೇ ಬಳಸಿದ್ದಾರೆ ಎಂಬುದನ್ನು ಅಂಪೈರ್ಗಳು ದೃಢಪಡಿಸಿದ್ದಾರೆ.
ಆನ್-ಫೀಲ್ಡ್ ಅಂಪೈರ್‌ಗಳಾದ ಅಹ್ಸಾನ್ ರಜಾ ಮತ್ತು ಮರೈಸ್ ಎರಾಸ್ಮಸ್, ಮೂರನೇ ಅಂಪೈರ್ ಕ್ರಿಸ್ ಗಫಾನಿ ಮತ್ತು ನಾಲ್ಕನೇ ಅಂಪೈರ್ ಮೈಕ್ ಬರ್ನ್ಸ್ ಈ ಆರೋಪವನ್ನು ಅಲಿ ವಿರುದ್ಧ ಮಾಡಿದ್ದರು. ಹಂತ 1 ಉಲ್ಲಂಘನೆಗೆ ಅಧಿಕೃತ ವಾಗ್ದಂಡನೆಯ ಕನಿಷ್ಠ ದಂಡವನ್ನು, ಎರಡನೇ ಹಂತದ ಅಪರಾಧಕ್ಕೆ ಆಟಗಾರನ ಪಂದ್ಯದ ಶುಲ್ಕದ ಗರಿಷ್ಠ 50 ಪ್ರತಿಶತ ದಂಡವನ್ನು ಮತ್ತು ಒಂದು ಅಥವಾ ಎರಡು ಡಿಮೆರಿಟ್ ಅಂಕಗಳನ್ನು ನೀಡಲಾಗುತ್ತದೆ.
ನಾಲ್ಕಕ್ಕಿಂತ ಹೆಚ್ಚು ಡಿಮೆರಿಟ್ ಅಂಕ ಪಡೆದರೆ ಪಂದ್ಯದಿಂದ ರದ್ದು: ಐಸಿಸಿ ನಿಯಮದಂತೆ 24 ತಿಂಗಳ ಅವಧಿಯಲ್ಲಿ ಆಟಗಾರನು ನಾಲ್ಕು ಅಥವಾ ಹೆಚ್ಚಿನ ಡಿಮೆರಿಟ್ ಅಂಕಗಳನ್ನು ತಲುಪಿದಾಗ ಆಟಗಾರನನ್ನು ಅಮಾನತು ಮಾಡಲಾಗುತ್ತದೆ. ಎರಡು ಡಿಮೆರಿಟ್ ಅಂಕಕ್ಕೆ ಒಂದು ಟೆಸ್ಟ್, ಎರಡು ಏಕದಿನಗಳು ಅಥವಾ ಎರಡು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿಷೇಧವನ್ನು ಮಾಡಲಾಗುತ್ತದೆ. ಆಟಗಾರ ಅಂಕದ ನಂತರ ಯಾವ ಪಂದ್ಯವನ್ನು ಮೊದಲು ಆಡುತ್ತಾನೆ ಎಂಬುದರ ಮೇಲೆ ಇದು ನಿರ್ಧಾರ ಆಗುತ್ತದೆ. 24 ತಿಂಗಳ ನಂತರ ಆಟಗಾರ ಯಾವುದೇ ಡಿಮೆರಿಟ್ ಅಂಕ ಪಡೆಯದಿದ್ದರೆ ಪಟ್ಟಿಯಿಂದ ಹೆಸರು ತೆಗೆದು ಹಾಕಲಾಗುತ್ತದೆ.
ಇದನ್ನೂ ಓದಿ:On This Day: ಕಪಿಲ್ ದೇವ್ ಅಜೇಯ ಶತಕದ ವಿಶ್ವಕಪ್ ಇನ್ನಿಂಗ್ಸ್.. ಬಿಬಿಸಿ ಮುಷ್ಕರದಿಂದ ಟಿವಿಯಲ್ಲಿ ಪ್ರಸಾರವಾಗದ ಪಂದ್ಯ