ಮುಂಬೈ: ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟರ್ ಕ್ರಿಸ್ ಗೇಲ್ ಮುಂಬರುವ ಐಪಿಎಲ್ ಮೆಗಾ ಹರಾಜಿಗೆ ತಮ್ಮ ಹೆಸರು ನೋಂದಾಯಿಸಿಕೊಂಡಿಲ್ಲದೇ ಇರುವುದರಿಂದ ನಗದು ಸಮೃದ್ಧ ಲೀಗ್ನಲ್ಲಿ ಕೆರಿಬಿಯನ್ ದೈತ್ಯನ ಆರ್ಭಟ ಬಹುತೇಕ ಅಂತ್ಯವಾಗಿದೆ.
ಗೇಲ್ ಅಲ್ಲದೆ ಇಂಗ್ಲೆಂಡ್ ತಂಡದ ಆಲ್ರೌಂಡರ್ಗಳಾದ ಬೆನ್ ಸ್ಟೋಕ್ಸ್ ಮತ್ತು ಸ್ಯಾಮ್ ಕರ್ರನ್, ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ 2022ರ ಹರಾಜಿನಿಂದ ಹೊರಗುಳಿದಿದ್ದಾರೆ. ಕಳೆದ ವರ್ಷ ಗಾಯದ ಕಾರಣದಿಂದ ಐಪಿಎಲ್ನಿಂದ ಹೊರಬಿದ್ದಿದ್ದ ಜೋಫ್ರಾ ಆರ್ಚರ್, ಕ್ರಿಸ್ ವೋಕ್ಸ್ ಮತ್ತು ಸ್ಯಾಮ್ ಕರ್ರನ್ ಕೂಡ ಹರಾಜಿಗೆ ಅಲಭ್ಯರಾಗಲಿದ್ದಾರೆ.
ಇನ್ನು ಟೆಸ್ಟ್ ಕ್ರಿಕೆಟ್ನಲ್ಲಿ ದಯನೀಯ ಪ್ರದರ್ಶನ ತೋರಿ ಸತತ 4 ಟೆಸ್ಟ್ ಸರಣಿ ಕಳೆದುಕೊಂಡಿರುವ ಇಂಗ್ಲೆಂಡ್ ಆ್ಯಶಷ್ನಲ್ಲಿ ಮುಖಭಂಗ ಅನುಭವಿಸಿದ ಮೇಲೆ ಕೆಲವು ಮಾಜಿ ಇಂಗ್ಲಿಷ್ ಆಟಗಾರರು ಐಪಿಎಲ್ ಕಾರಣ ಎಂದು ಟೀಕಿಸಿದ್ದರು.
ಹಾಗಾಗಿ ಕೆಲವು ಇಂಗ್ಲೆಂಡ್ ಕ್ರಿಕೆಟಿಗರು ಟೆಸ್ಟ್ ಕ್ರಿಕೆಟ್ಗೆ ಹೆಚ್ಚು ಹೊತ್ತು ನೀಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಐಪಿಎಲ್ ನಡೆಯುವ ವೇಳೆ ನಡೆಯುವ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಆಡುವುದಕ್ಕೆ ನಿರ್ಧರಿಸಿದ್ದಾರೆ. ಸ್ಟಾರ್ಕ್ ವಿದೇಶಿ ಟೆಸ್ಟ್ ಸರಣಿಗಳಿಗೆ ಸಿದ್ಧರಾಗುವುದಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.