ಮ್ಯಾಂಚೆಸ್ಟರ್(ಇಂಗ್ಲೆಂಡ್):ಮಾಜಿ ಆಟಗಾರರಾದ ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಬಳಿಕ ಭಾರತ ಕ್ರಿಕೆಟ್ ತಂಡಕ್ಕೆ ಸಿಕ್ಕ ಹೊಡಿಬಡಿ ಆಟಗಾರನೆಂದರೆ ಅದು ವಿಕೆಟ್ ಕೀಪರ್ ರಿಷಬ್ ಪಂತ್. ಮೈದಾನದಲ್ಲಿ ತಾನು ಇದ್ದಷ್ಟು ಹೊತ್ತು ಚೆಂಡನ್ನು ಬೌಂಡರಿ ಗೆರೆಯಾಚೆ ದಾಟಿಸುವುದೇ ಈತನ ಗುರಿ. ನಿನ್ನೆ ಇಂಗ್ಲೆಂಡ್ ವಿರುದ್ಧ ನಡೆದ 3ನೇ ಏಕದಿನ ಪಂದ್ಯದಲ್ಲಿ ಪಂತ್ ಆಟ ಕಂಡು ಭಾರತ ಮಾತ್ರವಲ್ಲ ಇಂಗ್ಲೆಂಡ್ನ ಹಾಲಿ, ಮಾಜಿ ಆಟಗಾರರೇ ಅವಕ್ಕಾಗಿದ್ದಾರೆ.
"ಭಾರತ ತಂಡದ ವಿಕೆಟ್ ಕೀಪರ್ ರಿಷಬ್ ಪಂತ್ ಒಬ್ಬ ಅದ್ಭುತ ಮನರಂಜನೆಕಾರ ಮತ್ತು ಅಷ್ಟೇ ಸ್ಮಾರ್ಟ್ ಕ್ರಿಕೆಟರ್" ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಟ್ವೀಟ್ ಮಾಡಿದ್ದಾರೆ. ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 5 ವಿಕೆಟ್ಗಳಿಂದ ಗೆದ್ದು ಸರಣಿ ಜಯ ಸಾಧಿಸಿತು.