ಬ್ರಿಸ್ಬೇನ್:ಆಸ್ಟ್ರೇಲಿಯಾದ ಬ್ಯಾಟರ್ ಮಾರ್ನಸ್ ಲಾಬುಶೇನ್ ಪಾಕಿಸ್ತಾನದ ವಿರುದ್ಧ ಟೆಸ್ಟ್ ಸರಣಿಗೆ ತಮ್ಮದೇ ಆದ ರೀತಿಯಲ್ಲಿ ಸಿದ್ಧರಾಗುತ್ತಿದ್ದು, ಅಲ್ಲಿನ ಸ್ಪಿನ್ ಬೌಲರ್ಗಳ ಸವಾಲಿಗೆ ಉತ್ತರ ನೀಡುವುದಕ್ಕೆ ತಯಾರಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧ ಆ್ಯಶಸ್ ಸರಣಿಯನ್ನು ಗೆದ್ದಿರುವ ಆಸ್ಟ್ರೇಲಿಯಾ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಇದೀಗ ಬರೋಬ್ಬರಿ 24 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಳ್ಳುತ್ತಿದ್ದು, ಅಲ್ಲಿನ ಪರಿಸ್ಥಿತಿಯಲ್ಲಿ ಆಡುವುದು ಕಾಂಗರೂಪಡೆಗೆ ಅಪರಿಚಿತ ಸವಾಲಾಗಿದೆ ಎಂದು ಲಾಬುಶೇನ್ ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾ ಮೂಲದ ಆಸ್ಟ್ರೇಲಿಯಾ ಕ್ರಿಕೆಟಿಗ ಪ್ರಸ್ತುತ ವಿಶ್ವದ ಶ್ರೇಷ್ಠ ಟೆಸ್ಟ್ ಬ್ಯಾಟರ್ಗಳಲ್ಲಿ ಒಬ್ಬರಾಗಿದ್ದಾರೆ. ಫಾಸ್ಟ್ ಮತ್ತು ಬೌನ್ಸಿ ಪಿಚ್ಗಳಲ್ಲಿ ತಮ್ಮ ಖದರ್ ತೋರಿಸಿರುವ ಲಾಬುಶೇನ್ ಇದೇ ಮೊದಲ ಬಾರಿಗೆ ಏಷ್ಯಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಹಾಗಾಗಿ ಇಲ್ಲಿನ ಸ್ಪಿನ್ ಬೌಲಿಂಗ್ಗೆ ಆಡುವುದು ಅವರಿಗೆ ದೊಡ್ಡ ಸವಾಲಾಗಲಿದೆ.