ನವದೆಹಲಿ: ಏಷ್ಯಾಕಪ್ ಕ್ರಿಕೆಟ್ 2023 ಇಂದಿನಿಂದ ಪ್ರಾರಂಭವಾಗಲಿದೆ. ಇದರಲ್ಲಿ 6 ದೇಶಗಳ ತಂಡಗಳು ಭಾಗವಹಿಸಲಿವೆ. ಈ ಬಾರಿ, 7 ಬಾರಿಯ ಚಾಂಪಿಯನ್ ಭಾರತ, 6 ಬಾರಿ ವಿಜೇತ ಶ್ರೀಲಂಕಾ ಮತ್ತು 2 ಬಾರಿ ಕಪ್ ಗೆದ್ದಿರುವ ಪಾಕಿಸ್ತಾನ ತಂಡಗಳ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಲಾಗುತ್ತಿದೆ. ಅದರಲ್ಲೂ ಪಾಕಿಸ್ತಾನ ಈ ಬಾರಿ ಪ್ರಬಲ ತಂಡವಾಗಿ ಕಂಡು ಬರುತ್ತಿದೆ. ಇದಕ್ಕೆ ಕಾರಣ ಇತ್ತೀಚೆಗಷ್ಟೇ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನ ಅಲಂಕರಿಸಿರುವುದು. ಅಲ್ಲದೇ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಾಯಕ ಬಾಬರ್ ಅಜಮ್ ನಂ.1 ಇದ್ದು, ಬ್ಯಾಟರ್ಗಳಾದ ಇಮಾಮ್ ಉಲ್ ಹಕ್ ಮತ್ತು ಫಾಕರ್ ಜಮಾನ್ ಕ್ರಮವಾಗಿ 3, 5ನೇ ಸ್ಥಾನದಲ್ಲಿದ್ದಾರೆ.
ಜೊತೆಗೆ, ಶ್ರೀಲಂಕಾ ತನ್ನ ತವರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸುವ ಲೆಕ್ಕಾಚಾರದಲ್ಲಿದೆ. ಆದರೆ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ನಿಸ್ತೇಜವಾಗಿಯೇನಿಲ್ಲ. ಈ ತಂಡಗಳಿಗೂ ಪುಟಿದೇಳುವ ಸಾಮರ್ಥ್ಯ ಇದೆ. ಇತ್ತೀಚೆಗೆ ಬಾಂಗ್ಲಾದೇಶ ಮತ್ತ ಅಫ್ಘಾನ್ ತಂಡಗಳು ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿವೆ. ನೇಪಾಳವೂ ಈ ಬಾರಿ ತನ್ನ ಬಲವನ್ನು ತೋರಲು ಮುಂದಾಗಿದೆ.
ಭಾರತ ತಂಡದ ಅಂಕಿ-ಅಂಶಗಳನ್ನು ನೋಡಿದರೆ, 2019ರಿಂದ ಏಕದಿನದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ್ದು, ಹೆಚ್ಚು ಗೆಲುವಿನ ರೇಟಿಂಗ್ ಸಹ ಹೊಂದಿದೆ. ಆದರೆ ಭಾರತ - ಪಾಕಿಸ್ತಾನದ ಪಂದ್ಯಗಳು ಏಷ್ಯಾಕಪ್ ಮತ್ತು ವಿಶ್ವಕಪ್ನಲ್ಲಿ ಮಾತ್ರ ಆಗಿರುವುದರಿಂದ ಈ ಮುಖಾಮುಖಿ ಹೆಚ್ಚು ಕಾವು ಪಡೆಯುತ್ತಿದೆ. ಅಲ್ಲದೇ, ನಂ.1 ತಂಡದ ವೇಗದ ಬೌಲಿಂಗ್ ಭಾರತವನ್ನು ಕಾಡುವ ಭಯ ಇದೆ.
ಪುರುಷರ ಏಷ್ಯಾಕಪ್ 2023 ಇಂದಿನಿಂದ (ಆಗಸ್ಟ್ 30) ಪ್ರಾರಂಭವಾಗಲಿದ್ದು, ಸಂಪೂರ್ಣವಾಗಿ ಪಾಕಿಸ್ತಾನದಲ್ಲಿ ನಡೆಯಬೇಕಿತ್ತು. ಆದರೆ ಭಾರತ ತಂಡವು ಪಾಕಿಸ್ತಾನ ಪ್ರವಾಸ ಮಾಡದ ಹಿನ್ನೆಲೆಯಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಗಳನ್ನು ಆಡಿಸಲಾಗುತ್ತಿದೆ. ಎರಡು ಆತಿಥೇಯ ರಾಷ್ಟ್ರಗಳಲ್ಲದೆ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭಾರತ ಮತ್ತು ನೇಪಾಳದ ತಂಡಗಳು 16ನೇ ಆವೃತ್ತಿಯ ಏಷ್ಯಾಕಪ್‌ನಲ್ಲಿ ಭಾಗವಹಿಸಲಿವೆ.
ಏಕದಿನ ಮತ್ತು ಟಿ20 ಮಾದರಿಯಲ್ಲಿ ಏಷ್ಯಾಕಪ್: ಏಷ್ಯಾಕಪ್ ಪಂದ್ಯಾವಳಿಯನ್ನು 1984ರಿಂದ ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ಇದನ್ನು ಏಕದಿನ ಮತ್ತು ಟಿ20 ಸ್ವರೂಪದಲ್ಲೂ ಆಡಿಸಲಾಗಿದೆ. ಈ ವರ್ಷ ಏಕದಿನ ವಿಶ್ವಕಪ್ ಹಿನ್ನಲೆಯಲ್ಲಿ ಒನ್ ಡೇ ಮಾದರಿಯಲ್ಲೇ ಪಂದ್ಯವನ್ನು ಆಡಿಸಲಾಗುತ್ತಿದೆ. ಭಾರತ ತಂಡ ಇದುವರೆಗೂ 6 ಏಕದಿನ ಮತ್ತು ಒಂದು ಟಿ20 ಮಾದರಿಯ ಪ್ರಶಸ್ತಿ ಸೇರಿದಂತೆ ಒಟ್ಟು 7 ಬಾರಿ ಪ್ರಶಸ್ತಿ ಗೆದ್ದಿದೆ. ಅತಿ ಹೆಚ್ಚು ಏಷ್ಯಾಕಪ್ ಗೆದ್ದ ತಂಡ ಭಾರತ. ಶ್ರೀಲಂಕಾ 6 ಮತ್ತು ಪಾಕಿಸ್ತಾನ 2 ಬಾರಿ ಗೆದ್ದಿದೆ.
ಹೇಗೆ ಆಡಿಸಲಾಗುತ್ತದೆ ಏಷ್ಯಾಕಪ್ 2023: ಏಷ್ಯಾಕಪ್ 2023 ಅನ್ನು ಎರಡು ಗುಂಪುಗಳಲ್ಲಿ ಆಡಲಾಗುತ್ತದೆ. ಪಾಕಿಸ್ತಾನ, ಭಾರತ ಮತ್ತು ನೇಪಾಳವು ಎ ಗುಂಪಿನಲ್ಲಿದ್ದರೆ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾವು ಬಿ ಗುಂಪಿನಲ್ಲಿದೆ. ಗುಂಪು ಹಂತದಲ್ಲಿ ಪ್ರತಿ ತಂಡ ಒಮ್ಮೆ ಮುಖಾಮುಖಿ ಆಗಲಿವೆ. ಇಲ್ಲಿಂದ ಎರಡು ತಂಡಗಳು ಹೊರಗುಳಿಯುತ್ತವೆ. ನಂತರ ಸೂಪರ್ 4 ಹಂತದ ಪಂದ್ಯಗಳು ನಡೆಯಲಿವೆ. ಈ ಹಂತದಲ್ಲಿನ ಟಾಪ್ ಎರಡು ತಂಡಗಳು ಫೈನಲ್ ಆಡಲಿವೆ. ಸೆಪ್ಟೆಂಬರ್ 17ರಂದು ಕೊಲಂಬೊದಲ್ಲಿ ಫೈನಲ್ ಹಣಾಹಣಿ ನಡೆಯಲಿದೆ. ಏಷ್ಯಾಕಪ್ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಕೇವಲ 4 ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಆಯೋಜಿಸಲಾಗಿದೆ. ಪಾಕಿಸ್ತಾನದ ಮುಲ್ತಾನ್ ಮತ್ತು ಲಾಹೋರ್, ಶ್ರೀಲಂಕಾದ ಕ್ಯಾಂಡಿ ಮತ್ತು ಕೊಲಂಬೊದಲ್ಲಿ ನಡೆಯಲಿವೆ.