ಅಹಮದಾಬಾದ್: ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್ ಪಂದ್ಯ ಗೆಲ್ಲುವುದು ಭಾರತಕ್ಕೆ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಸೋತರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿಗೆ ಶ್ರೀಲಂಕಾ ಪಂದ್ಯದ ಫಲಿತಾಂಶವನ್ನು ಕಾದು ನೋಡಬೇಕಾಗುತ್ತದೆ. ಒಂದೊಮ್ಮೆ ಆಸಿಸ್ ಗೆಲುವು ಸಾಧಿಸಿದರೆ ಸರಣಿ ಸಮಬಲವಾಗಲಿದೆ.
ಗುರುವಾರದಿಂದ ಐದು ದಿನಗಳ ಕಾಲ ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸರಣಿಯ ನಾಲ್ಕನೇ ಪಂದ್ಯ ಆರಂಭವಾಗಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಆಯ್ಕೆ ಆಗುವ ಸಲುವಾಗಿ ಭಾರತ ತಂಡದಲ್ಲಿ ಕೆಲವು ಬದಲಾವಣೆಯ ಸಾಧ್ಯತೆ ಗೋಚರಿಸಿದೆ. ಮೂರು ಪಂದ್ಯಗಳಲ್ಲಿ ವಿಕೆಟ್ ಕೀಪಿಂಗ್ ಮಾಡಿದ ಕೆ.ಎಸ್.ಭರತ್ ಅವರ ಜಾಗಕ್ಕೆ ಇಶನ್ ಕಿಶನ್ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಇಬ್ಬರು ಭಾರತೀಯ ಆಟಗಾರರು ಪಾದಾರ್ಪಣೆ ಮಾಡಿದ್ದಾರೆ. ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಸೂರ್ಯ ಕುಮಾರ್ ಯಾದವ್ ಮತ್ತು ಕೆ.ಎಸ್.ಭರತ್ ಚೊಚ್ಚಲ ಇನ್ನಿಂಗ್ಸ್ ಆರಂಭಿಸಿದ್ದರು. ಇದೀಗ ಕೊನೆಯ ಟೆಸ್ಟ್‌ಗೆ ಭರತ್ ಜಾಗಕ್ಕೆ ಕಿಶನ್ ಕಿಶನ್ ಬರುವ ಸಾಧ್ಯತೆ ಕಾಣುತ್ತಿದೆ. ಏಕದಿನ ಪಂದ್ಯದಲ್ಲಿ ಶತಕ, ದ್ವಿಶತಕ ದಾಖಲಿಸಿರುವ ಕಿಶನ್ ಟೆಸ್ಟ್‌ಗೆ ಪದಾರ್ಪಣೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.
ಕಳೆದ ಮೂರು ಟೆಸ್ಟ್ ಪಂದ್ಯಗಳಲ್ಲಿ ಕೀಪಿರ್ ಆಗಿ ಕೆ.ಎಸ್.ಭರತ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಬ್ಯಾಟಿಂಗ್ನಲ್ಲಿ ವೈಫಲ್ಯ ಕಂಡಿದ್ದಾರೆ. ಮೂರೂ ಪಂದ್ಯದಲ್ಲಿ 5 ಇನ್ನಿಂಗ್ಸ್ ಆಡಿರುವ ಅವರು ಕೇವಲ 57 ರನ್ ಗಳಿಸಿದ್ದಾರೆ. ಎರಡನೇ ಟೆಸ್ಟ್ನ ದ್ವಿತೀಯ ಇನ್ನಿಂಗ್ಸ್ನಲ್ಲಿ 23 ರನ್ ಗಳಿಸಿದ್ದೇ ಅವರ ಅತೀ ಹೆಚ್ಚು ರನ್ ಗಳಿಕೆ.