ಡಬ್ಲಿನ್(ಐರ್ಲೆಂಡ್) :ಡಬ್ಲಿನ್ನಲ್ಲಿ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಭಾರತ ವಿರುದ್ಧ ಐರ್ಲೆಂಡ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ. ಕಳೆದ ಪಂದ್ಯದಲ್ಲಿ ಆಡಿದ ಆಟಗಾರರನ್ನೇ ಉಭಯ ತಂಡಗಳು ಕಣಕ್ಕಿಳಿಸಿವೆ. ಮೊದಲ ಪಂದ್ಯದಲ್ಲಿ ಭಾರತ ಡಕ್ವರ್ಥ್ ಲೂಯಿಸ್ ನಿಯಮದ ಅನುಸಾರ 2 ರನ್ ಗೆಲುವು ಸಾಧಿಸಿತ್ತು.
ವೇಗಿ ಜಸ್ಪ್ರೀತ್ ಬೂಮ್ರಾ ನೇತೃತ್ವದ ತಂಡ ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಕೈವಶಕ್ಕೆ ತಂತ್ರ ರೂಪಿಸಿದ್ದರೆ, ಇತ್ತ ಆತಿಥೇಯ ಐರ್ಲೆಂಡ್ ಕೂಡ ಬಲಿಷ್ಠ ಭಾರತವನ್ನು ಸೋಲಿಸಿ ಸರಣಿ ಸಮಬಲ ಸಾಧಿಸಲು ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ನಾಯಕ ಪಾಲ್ ಸ್ಟಿರ್ಲಿಂಗ್ ಬ್ಯಾಟಿಂಗ್ನಲ್ಲಿ ವಿಫಲವಾಗಿದ್ದರು. ಆರಂಭದಲ್ಲೇ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಕರ್ಟಿಸ್ ಕ್ಯಾಂಫರ್ ಮತ್ತು ಬ್ಯಾರಿ ಮೆಕಾರ್ಟಿ ಶಕ್ತಿ ತುಂಬಿದ್ದರು.
ಬ್ಯಾರಿ ಮೆಕಾರ್ಟಿ ಭರ್ಜರಿ ಅರ್ಧಶತಕ(51)ಬಾರಿಸಿ ತಂಡವನ್ನು ಆಧರಿಸಿದ್ದರು. ಇನ್ನೊಂದು ತುದಿಯಲ್ಲಿ ಕ್ಯಾಂಪರ್ 39 ರನ್ ಮಾಡಿ ನೆರವಾಗಿದ್ದರು. ಬಳಿಕ ಭಾರತದ ಇನಿಂಗ್ಸ್ ವೇಳೆ ಮಳೆ ಸುರಿದ ಕಾರಣ ಪಂದ್ಯವನ್ನು ರದ್ದು ಮಾಡಲಾಗಿತ್ತು. ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಭಾರತ 2 ರನ್ ಮುಂದಿದ್ದ ಕಾರಣ ಜಯಶಾಲಿ ಎಂದು ಘೋಷಿಸಲಾಗಿತ್ತು.
ಹಿರಿಯರ ಜಾಗದಲ್ಲಿ ಸ್ಥಾನ ಪಡೆದಿರುವ ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ರಿಂಕುಸಿಂಗ್ ಬ್ಯಾಟಿಂಗ್ನಲ್ಲಿ ಮಿಂಚಬೇಕಿದೆ. ನಾಯಕ ಬೂಮ್ರಾ ಗಾಯದ ಬಳಿಕ ಭರ್ಜರಿ ಕಮ್ಬ್ಯಾಕ್ ಮಾಡಿದ್ದಾರೆ. ಮೊದಲ ಪಂದ್ಯದಲ್ಲೇ 2 ವಿಕೆಟ್ ಗಳಿಸಿದ್ದರು. ಜೊತೆಗೆ ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ತಮ್ಮ ಕೌಶಲ್ಯ ಪ್ರದರ್ಶಿಸಬೇಕಿದೆ.