ಬೆಂಗಳೂರು:ಡೇವಿಡ್ ವಾರ್ನರ್ ನೇತೃತ್ವದ ಡೆಲ್ಲಿ ತಂಡವು ಐಪಿಎಲ್ 2023ರಲ್ಲಿ ತಮ್ಮ ಉಳಿದ ಒಂಬತ್ತು ಪಂದ್ಯಗಳನ್ನು ಗೆಲ್ಲಬಹುದು. ಐದು ಪಂದ್ಯಗಳ ಸೋಲಿನ ನಂತರ ಪುಟಿದೇಳುತ್ತೇವೆ ಎಂದು ಡೆಲ್ಲಿ ಕ್ಯಾಪಿಟಲ್ಸ್‌ನ ನಿರ್ದೇಶಕ ಸೌರವ್ ಗಂಗೂಲಿ ಹೇಳಿದ್ದಾರೆ.
ಶನಿವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 23 ರನ್‌ಗಳ ಸೋಲಿನೊಂದಿಗೆ ಡೆಲ್ಲಿ ಪಂದ್ಯಾವಳಿಯಲ್ಲಿ ಸತತ ಐದನೇ ಸೋಲು ಅನುಭವಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಸೋಲಿನ ನಂತರ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಡ್ರೆಸ್ಸಿಂಗ್ ರೂಮ್ನಲ್ಲಿ ನಡೆದ ಸಂಭಾಷಣೆಯ ವಿಡಿಯೋವನ್ನು ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿಕೊಂಡಿದೆ.
ಅದರಲ್ಲಿ, "ನಾವು ಸೋಲನ್ನು ಹಿಂದೆ ಹಾಕಬೇಕಾಗಿದೆ. ನಾಯಕನ ಸಮೇತ ಹೊಸದಾಗಿ ಹಿಂದಿರುಗಬೇಕಿದೆ. ನಾವು ಇದಕ್ಕಿಂತ ಕೆಟ್ಟ ಪ್ರದರ್ಶನವನ್ನು ನೀಡಲು ಸಾಧ್ಯವಿಲ್ಲ. ನಾವು ಇದಕ್ಕಿಂತ ಉತ್ತಮವಾದುದನ್ನು ನೀಡಬೇಕಿದೆ. ನಮ್ಮ ಮುಂದೆ ಇನ್ನೂ ಒಂಬತ್ತು ಪಂದ್ಯಗಳಿವೆ, ನಾವು ಎಲ್ಲವನ್ನೂ ಗೆಲ್ಲಬಹುದು. ಈ ಸಮಯದಲ್ಲಿ ನಾವು ಕ್ವಾಲಿಫೈ ಆಗುತ್ತೇವೋ, ಇಲ್ಲವೋ ಎಂಬುದರ ಬಗ್ಗೆ ಚಿಂತಿಸಬಾರದು" ಎಂದು ಗಂಗೂಲಿ ಸಲಹೆ ನೀಡಿದರು.
"ನಾವು ನಮ್ಮ ತಂಡವನ್ನು ಗಮನಿಸಿ, ನಮಗಾಗಿ ಮತ್ತು ತಂಡಕ್ಕಾಗಿ ಆಡೋಣ. ನಾವು ಗೆಲುವಿನ ಸಂಭ್ರಮದಲ್ಲಿರಲು ನೋಡೋಣ. ಇತರ ತಂಡಗಳಿಗಿಂತ ಉತ್ತಮ ಟೀಮ್ ನಮ್ಮಲ್ಲಿದೆ. ಎಲ್ಲರೂ ಒಟ್ಟಾಗಿ ಆಡೋಣ. ನಮಗೆ ಒಂದು ಗೆಲುವು ಬೇಕಾಗಿದೆ ಅಷ್ಟೇ. ನಾವು ನಾಯಕ ಡೇವಿಡ್ ವಾರ್ನರ್ಗೆ ಬದ್ಧರಾಗಿರೋಣ, ಅವರು ನಾಯಕರಾಗಿದ್ದಾರೆ. ಅವರು ತಂಡದ ಪ್ರಮುಖ ವ್ಯಕ್ತಿಯಾಗಿದ್ದಾರೆ. ಅವರು ಕಠಿಣ ಕೆಲಸ ಹೊಂದಿದ್ದಾರೆ, ನಾವು ಅವರ ಜೊತೆಯಲ್ಲಿದ್ದು ಉತ್ತಮವಾಗಿ ಹಿಂದಿರುಗೋಣ" ಎಂಬ ಸಂದೇಶ ದಾದಾ ನೀಡಿದ್ದಾರೆ.
ಮುಖ್ಯ ಕೋಚ್ ರಿಕಿ ಪಾಂಟಿಂಗ್ ಅವರು ಪಂದ್ಯಾವಳಿಯಲ್ಲಿ ಮೈದಾನಕ್ಕಿಳಿದಾಗಲೆಲ್ಲ ತಂಡವು ತಮ್ಮ ಫೀಲ್ಡಿಂಗ್‌ನಲ್ಲಿ ಉತ್ತಮವಾಗಿರಬೇಕು ಎಂದು ಒತ್ತಾಯಿಸಿದರು. "ನಾವು ಮುಂದಿನ ಬಾರಿ ಫೀಲ್ಡ್ ತೆಗೆದುಕೊಂಡಾಗ, ನಾನು ಫೀಲ್ಡಿಂಗ್ ಅನ್ನು ಶ್ರೇಷ್ಠತೆಗೆ ಕೊಂಡೊಯ್ಯಲು ಬಯಸುತ್ತೇನೆ ಎನ್ನಬೇಕು. ಪ್ರತಿಯೊಬ್ಬರೂ ತಮ್ಮದೇ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ನಿಮ್ಮ ಸ್ವಂತ ಆಲೋಚನೆಯಿಂದ ಪಂದ್ಯವನ್ನು ನೀವೇ ತೆಗೆದುಕೊಂಡು ಹೋಗಬೇಕು. ಗೆಲುವು ಸಾಧಿಸಲು ಒಂದು ಮಾರ್ಗವೆಂದರೆ ಎಲ್ಲರೂ ಸೇರಿ ತಂಡವಾಗಿ ಆಡಬೇಕಿರುವುದು" ಎಂದು ರಿಕ್ಕಿ ಪಾಂಟಿಂಗ್ ಹೇಳಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಆವೃತ್ತಿಯ ಐದನೇ ಸೋಲು ಅನುಭವಿಸಿತು. ಆರ್ಸಿಬಿ ನೀಡಿದ್ದ 174 ರನ್ ಗುರಿಯನ್ನು ಬೆನ್ನತ್ತಿದ್ದ ಡೆಲ್ಲಿ ಬ್ಯಾಟಿಂಗ್ ವೈಫಲ್ಯ ಎದುರಿಸಿ 23 ರನ್ ಸೋಲು ಕಂಡಿತು. ಮನೀಶ್ ಪಾಂಡೆ ಅರ್ಧಶತಕ ಗಳಿಸಿ ಆವೃತ್ತಿಯ ಉತ್ತಮ ಪ್ರದರ್ಶನ ನೀಡಿದರು. ಬೌಲಿಂಗ್ನಲ್ಲಿ ಕುಲ್ದೀಪ್ ಸಹ ಪ್ರಮುಖ ಎರಡು ವಿಕೆಟ್ ಪಡೆದಿದ್ದರು. ಆದರೆ ಗೆಲುವು ಮಾತ್ರ ಕೈತಪ್ಪಿತ್ತು. ಐಪಿಎಲ್ 2023 ರಲ್ಲಿ ದೆಹಲಿಯ ಮುಂದಿನ ಪಂದ್ಯವು ಏಪ್ರಿಲ್ 20 ರಂದು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಎರಡು ಬಾರಿ ಟ್ರೋಫಿ ವಿಜೇತ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆಯಲಿದೆ.
ಇದನ್ನೂ ಓದಿ:ಗಂಗೂಲಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ ಕೊಹ್ಲಿ