ಗುವಾಹಟಿ (ಅಸ್ಸಾಂ):ರಾಜಸ್ಥಾನ್ ರಾಯಲ್ಸ್ ತನ್ನ ಎರಡನೇ ತವರು ಮೈದಾನವಾದ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಾಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಡೆಲ್ಲಿ ಗೆಲುವಿನ ಖಾತೆ ತೆರೆಯಲು ಪ್ರಯತ್ನಿಸಿದರೆ, ರಾಜಸ್ಥಾನ್ ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಸೋಲು ಮರೆತು ಮತ್ತೆ ಗೆಲುವಿನ ಓಟ ಆರಂಭಿಸುವ ತವಕದಲ್ಲಿದೆ.
ರಾಜಸ್ಥಾನಕ್ಕೆ ಆರಂಭಿಕರೇ ಬಲ:ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆರಂಭಿಕ ಮೂವರು ಬ್ಯಾಟರ್ಗಳು ಬಲವಾಗಿದ್ದಾರೆ. ಅವರು ವಿಫಲರಾದರೆ ತಂಡ ಏಕಾಏಕಿ ಕುಸಿತ ಕಾಣುತ್ತದೆ. ಮೊದಲ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್ ಮತ್ತು ಸಂಜು ಸ್ಯಾಮ್ಸನ್ ಅವರ ಅರ್ಧಶತಕದ ಬಲದಿಂದ ಬೃಹತ್ ಮೊತ್ತ ಕಲೆಹಾಕಿತ್ತು. ಬೌಲಿಂಗ್ನಲ್ಲಿ ಚಹಾಲ್ ಕಮಾಲ್ ಮಾಡಿ 4 ವಿಕೆಟ್ ಕಬಳಿಸಿದ್ದರು.
ಎರಡನೇ ಪಂದ್ಯದಲ್ಲಿ ಗೆಲುವಿನ ಸನಿಹದಲ್ಲಿ ರಾಜಸ್ಥಾನ ಎಡವಿತ್ತು. ಆರ್.ಅಶ್ವಿನ್ರನ್ನು ಆರಂಭಿಕರಾಗಿ ಇಳಿಸಿ ಪ್ರಯೋಗ ಮಾಡಿತಾದರೂ ಯಶ ಸಿಗಲಿಲ್ಲ. ಅಶ್ವಿನ್ ಸೊನ್ನೆ ಸುತ್ತಿದರೆ, ಬಟ್ಲರ್ ವಿಫಲರಾದರು. ಸಂಜು, ಶಿಮ್ರಾನ್ ಹೆಟ್ಮೆಯರ್ ಮತ್ತು ಧ್ರುವ್ ಜುರೆಲ್ ಗೆಲುವಿನ ಮೆಟ್ಟಿಲು ಮುಟ್ಟುವ ಮುನ್ನ ವಿಕೆಟ್ ಕೊಟ್ಟಿದ್ದು, ಸೋಲಿಗೆ ಕಾರಣವಾಯಿತು. ಗುವಾಹಟಿಯ ಪ್ರೇಕ್ಷಕರಿಗೆ ನಾಳೆ ಗೆಲುವಿನ ಸಿಹಿ ಕೊಡಲು ರಾಜಸ್ಥಾನ ಎದುರು ನೋಡುತ್ತಿದೆ.
ಕ್ಯಾಪಿಟಲ್ಸ್ಗೆ ಬ್ಯಾಟಿಂಗ್ ಕೊರತೆ:ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಏಕಾಂಗಿ ಹೋರಾಟಗಾರರಾಗಿದ್ದು ಅವರಿಗೆ ತಂಡದಲ್ಲಿ ಸರಿಯಾದ ಸಾಥ್ ಸಿಗುತ್ತಿಲ್ಲ. ಬೌಲಿಂಗ್ನಲ್ಲಿ ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಮುಖೇಶ್ ಕುಮಾರ್ ಮತ್ತು ಕಲಿಲ್ ಅಹಮದ್ ವಿಕೆಟ್ ಕೀಳುತ್ತಿಲ್ಲ. ತಂಡ ತವರಿನಲ್ಲೂ ಸೋಲು ಕಂಡಿದ್ದು, ಮೂರನೇ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳುತ್ತಾ ಕಾದು ನೋಡಬೇಕಿದೆ.