ಮುಂಬೈ(ಮಹಾರಾಷ್ಟ್ರ): ಇಂದು ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಎರಡನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ನಾಯಕ ರೋಹಿತ್ ಶರ್ಮಾ ಲೀಗ್ನ ನಾಲ್ಕನೇ ಗೆಲುವಿಗೆ ತವರಿನಲ್ಲಿ ಗೆಲುವಿನ ಓಟ ಮುಂದುವರಿಸಲು ಪ್ರಯತ್ನಿಸಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಕಳೆದ ಐದು ಪಂದ್ಯಗಳಲ್ಲಿ ಮೊದಲೆರಡು ಪಂದ್ಯಗಳನ್ನು ಸೋತು ನಂತರದ ಮೂರರಲ್ಲಿ ಗೆಲುವು ಕಂಡಿದ್ದು, ಇಂದು ನಾಲ್ಕನೇ ಗೆಲುವಿಗೆ ತಂತ್ರ ರೂಪಿಸುತ್ತಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ ಪ್ರಸ್ತುತ ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಗೆದ್ದು ಇನ್ನೂ 2 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 8 ಅಂಕಗಳೊಂದಿಗೆ ಅಗ್ರ ಶ್ರೇಯಾಂಕದ ತಂಡಗಳಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಮತ್ತೊಂದೆಡೆ ಪಂಜಾಬ್ ತಂಡ ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 24 ರನ್ಗಳ ಸೋಲನ್ನು ಕಂಡಿತ್ತು, ಅದನ್ನು ಮರೆತು ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳಬೇಕಿದೆ.
ಪಂಜಾಬ್ ತಂಡ 6 ಪಂದ್ಯಗಳಲ್ಲಿ ಮೂರು ಗೆದ್ದು, ಮೂರರಲ್ಲಿ ಸೋತು 6 ಅಂಕದಿಂದ ಸದ್ಯ ಏಳನೇ ಸ್ಥಾನದಲ್ಲಿದೆ. ಕಳೆದ ಎರಡು ಪಂದ್ಯಗಳಲ್ಲಿ ಶಿಖರ್ ಧವನ್ ಅನುಪಸ್ಥಿತಿಯಿಂದ ಪಂಜಾಬ್ ತಂಡಕ್ಕೆ ಉತ್ತಮ ಆರಂಭ ನೀಡಲು ಸಾಧ್ಯವಾಗುತ್ತಿಲ್ಲ. ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಪಂಜಾಬ್ ಲಕ್ನೋದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ಅನ್ನು ಸೋಲಿಸಿತು, ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲನ್ನು ಎದುರಿಸಬೇಕಾಯಿತು.
ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಇದುವರೆಗೆ ಒಟ್ಟು 29 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಇದರಲ್ಲಿ 15 ಪಂದ್ಯಗಳನ್ನು ಮುಂಬೈ ಇಂಡಿಯನ್ಸ್ ಮತ್ತು 14 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ಗೆದ್ದಿದೆ. ಉಭಯ ತಂಡಗಳ ನಡುವಿನ ಕೊನೆಯ 5 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ 3 ರಲ್ಲಿ ಗೆದ್ದಿದ್ದು ಮೇಲುಗೈ ಸಾಧಿಸಿದೆ.