ಚೆನ್ನೈ:ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಸದ್ಯಕ್ಕೆ ಸುದ್ದಿಯಲ್ಲಿರುವುದು ಒಂದೇ ಕಾರಣಕ್ಕಾಗಿ, ಅದು ನಿವೃತ್ತಿ. ಯಶಸ್ವಿ ನಾಯಕನಿಗೆ ಇದು ಕೊನೆಯ ಐಪಿಎಲ್ ಎಂದು ಹೇಳಲಾಗಿದೆ. ಹೀಗಾಗಿಯೇ ಲೀಗ್ ಹಂತದ ಕೊನೆಯ ಪಂದ್ಯದ ಗೆಲುವಿನ ಬಳಿಕ ಮೈದಾನವೆಲ್ಲ ಸುತ್ತಾಡಿ ಧನ್ಯವಾದ ಹೇಳಿದ್ದರು. ಆದರೀಗ "ತಮ್ಮ ನಿವೃತ್ತಿಗೆ ಇನ್ನೂ ಸಮಯವಿದೆ. ಈಗ್ಯಾಕೆ ಚರ್ಚೆ" ಎಂದೇಳುವ ಮೂಲಕ ಅಭಿಮಾನಿಗಳಲ್ಲಿನ ಪ್ರಶ್ನೆಯನ್ನು ಹಾಗೆಯೇ ಉಳಿಸಿದ್ದಾರೆ.
ನಿನ್ನೆ ನಡೆದ ಕ್ವಾಲಿಫೈಯರ್ನಲ್ಲಿ ಗುಜರಾತ್ ಎದುರು ಗೆಲುವು ಸಾಧಿಸುವ ಮೂಲಕ ಚೆನ್ನೈ ನೇರವಾಗಿ ಫೈನಲ್ ಪ್ರವೇಶಿಸಿದೆ. ಪಂದ್ಯದ ಬಳಿಕ ಖ್ಯಾತ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಅವರು ಕೇಳಿದ ನಿವೃತ್ತಿ ಪ್ರಶ್ನೆಗೆ ಉತ್ತರಿಸಿದ ಮಹೇಂದ್ರ ಸಿಂಗ್ ದೋನಿ, ಮುಂದಿನ ಐಪಿಎಲ್ ಹರಾಜಿಗೆ ಇನ್ನೂ 8 ರಿಂದ 9 ತಿಂಗಳ ಬಾಕಿ ಇದೆ. ಆ ಬಳಿಕವಷ್ಟೇ ನಿವೃತ್ತಿಯ ಬಗ್ಗೆ ನೋಡೋಣ ಎಂದು ತೇಲಿಬಿಟ್ಟರು.
2023 ರ ಐಪಿಎಲ್ ದೋನಿಯ ಕೊನೆಯ ಸೀಸನ್ ಎಂಬ ಊಹಾಪೋಹ ಜೋರಾಗಿದೆ. ನೀವು ಮತ್ತೆ ಚೆನ್ನೈಗೆ ಬಂದು ಕ್ರಿಕೆಟ್ ಆಡ್ತೀರಾ ಎಂದು ಬೋಗ್ಲೆ ಅವರು ಕೇಳಿದಾಗ, ಈ ಬಗ್ಗೆ ನನಗೆ ಗೊತ್ತಿಲ್ಲ. ನಿವೃತ್ತಿ ನಿರ್ಧರಿಸಲು ಇನ್ನೂ 8- 9 ತಿಂಗಳುಗಳಿವೆ. ಅಲ್ಲಿಯವರೆಗೆ ಈ ತಲೆನೋವಿನ ಮಾತ್ಯಾಕೆ. ಭವಿಷ್ಯದ ಬಗ್ಗೆ ನಿರ್ಧರಿಸಲು ಯಾವುದೇ ಆತುರವಿಲ್ಲ. ಡಿಸೆಂಬರ್‌ನಲ್ಲಿ ಹರಾಜು ನಡೆಯಲಿದ್ದು, ಸಾಕಷ್ಟು ಸಮಯವಿದೆ. ನಂತರ ನಿರ್ಧರಿಸೋಣ ಎಂದರು.
ಇದನ್ನೂ ಓದಿ:IPL ನಲ್ಲಿ ಇಂದು: ಮುಂಬೈ- ಲಖನೌ ಸೆಣಸಾಟದಲ್ಲಿ ಎಲಿಮಿನೇಟ್ ಆಗೋರ್ಯಾರು?