ಜೈಪುರ/ ಲಕ್ನೋ: ರಾಜಸ್ಥಾನ ರಾಯಲ್ಸ್ ತಂಡ ನಾಳೆ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದೆ. ಮೂರು ವರ್ಷಗಳ ನಂತರ ತವರು ಮೈದಾನಕ್ಕೆ ರಾಜಸ್ಥಾನ ರಾಯಲ್ಸ್ ತಂಡ ಮರಳಿದೆ. ಅಭಿಮಾನಿಗಳು ಸಂಜು ನಾಯಕತ್ವದ ತಂಡದ ಆಟಕ್ಕಾಗಿ ಎದುರು ನೋಡುತ್ತಿದ್ದಾರೆ.
ಕೋವಿಡ್ ಕಾರಣದಿಂದ ಕಳೆದ ಮೂರು ವರ್ಷ ಐಪಿಎಲ್ ಕಳೆಗುಂದಿತ್ತು. ಈ ವರ್ಷ ಮತ್ತೆ 2018ರ ಐಪಿಎಲ್ನ ರೀತಿಯಲ್ಲಿ ಅಭಿಮಾನಿಗಳಿಂದ ತುಂಬಿದ ಕ್ರೀಡಾಂಗಣದಲ್ಲಿ ಪಂದ್ಯವಳಿ ನಡೆಯುತ್ತಿದೆ. 2018ರಂತೆ ಈ ವರ್ಷ ಮತ್ತೆ ಫ್ಯಾನ್ ಪಾರ್ಕ್ ಅನ್ನು ಸಹ ಬಿಸಿಸಿಐ ನಿರ್ಮಾಣ ಮಾಡಿದ್ದು ಅಭಿಮಾನಿಗಳಿಗೆ ಮನರಂಜನೆ ಹೆಚ್ಚಿಸಿದೆ.
2023ನೇ ಆವೃತ್ತಿಯಲ್ಲಿ ಐದು ಪಂದ್ಯಗಳನ್ನು ಆಡಿರುವ ಸಂಜು ಟೀಂ ನಾಲ್ಕರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಐದು ಪಂದ್ಯದಲ್ಲಿ ಎರಡು ಪಂದ್ಯ ರಾಜಸ್ಥಾನ ತಂಡ ತನ್ನ ಎರಡನೇ ತವರು ಮೈದಾನವಾಗಿ ಸೂಚಿಸಿದ ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದೆ. ಮೂರನೇ ತವರು ಪಂದ್ಯ ಜೈಪುರ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೀಗಾಗಿ ಹೆಚ್ಚು ವಿಶೇಷತೆಗಳು ನಾಳಿನ ಪಂದ್ಯಕ್ಕಿದೆ.
ರಾಜಸ್ಥಾನದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣಕ್ಕೆ ಹೊಸ ಲುಕ್ ಬಂದಿದೆ. ಪ್ರೇಕ್ಷಕರ ಸ್ಟ್ಯಾಂಡ್ ಮತ್ತು ಮೈದಾನದ ನಡುವೆ ಇದ್ದ ನೆಟ್ ಅನ್ನು ತೆಗೆಯಲಾಗಿದೆ. ಪ್ರೇಕ್ಷಕರಿಗೆ ನೋಡಲು ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ವಿಶೇಷ ಪಾರದರ್ಶಕ ಕನ್ನಡಿಯನ್ನು ಅಳವಡಿಸಿದೆ. ಅಲ್ಲ ಹೊಸ ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ. ಈಗಾಗಲೇ ಎಲ್ಲಾ ಟಿಕೆಟ್ಗಳು ಮಾರಾಟವಾಗಿವೆ. ಇದರಿಂದ 23,000 ಸಾಮರ್ಥ್ಯದ ಕ್ರೀಡಾಂಗಣ ನಾಳೆ ಸಂಪೂರ್ಣ ಭರ್ತಿಯಾಗಲಿದೆ.