ಅಹಮದಾಬಾದ್ (ಗುಜರಾತ್) :ಮಳೆಯಾಟದ ನಡುವೆಯೂ ರವೀಂದ್ರ ಜಡೇಜಾರ ಸಾಹಸದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ 2023 ರ 16ನೇ ಆವೃತ್ತಿಯ ಚಾಂಪಿಯನ್ ಆಗಿ ಪ್ರಶಸ್ತಿ ಎತ್ತಿ ಹಿಡಿಯಿತು. ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಡಕ್ವರ್ಥ್ ಲೂಯಿಸ್ ನಿಯಮದನ್ವಯ ಕೊನೆಯ ಎಸೆತದಲ್ಲಿ 5 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ 5ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿ ಮುಂಬೈ ಇಂಡಿಯನ್ಸ್ ದಾಖಲೆ ಸರಿಗಟ್ಟಿತು.
ಅಹಮದಾಬಾದ್‌ನಲ್ಲಿ ಕ್ರಿಕೆಟ್ ಆಟಕ್ಕಿಂತಲೂ ಮಳೆಯಾಟವೇ ಜೋರಾಗಿತ್ತು. ಇದರಿಂದ ಭಾನುವಾರ ನಡೆಯಬೇಕಿದ್ದ ಫೈನಲ್ ಪಂದ್ಯ ಮೀಸಲು ದಿನ ಸೋಮವಾರಕ್ಕೆ ಮುಂದೂಡಲಾಗಿತ್ತು. ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್ಗಳಲ್ಲಿ ಯುವ ಆಟಗಾರ ಸಾಯಿ ಸುದರ್ಶನ್ರ ಪರಾಕ್ರಮದಿಂದ 4 ವಿಕೆಟ್ಗೆ 214 ರನ್ ಗಳಿಸಿತು. ಚೆನ್ನೈ ಸೂಪರ್ ಕಿಂಗ್ಸ್ ಇನಿಂಗ್ಸ್ ಆರಂಭವಾದ ಕೆಲವೇ ನಿಮಿಷಗಳಲ್ಲಿ ಮಳೆ ಸುರಿಯಲಾರಂಭಿಸಿತು. 2 ಗಂಟೆ ಆಟ ನಿಂತ ಕಾರಣ ಡಕ್ವರ್ಥ್ ಲೂಯಿಸ್ ನಿಯಮದನ್ವಯ ಚೆನ್ನೈಗೆ 15 ಓವರ್ಗಳಲ್ಲಿ 171 ರನ್ ಗುರಿ ನೀಡಲಾಯಿತು. ಕೊನೆಯ ಎಸೆತದಲ್ಲಿ ಜಡೇಜಾ ಬೌಂಡರಿ ಬಾರಿಸುವ ಮೂಲಕ 171 ಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಮೈ ಚಳಿ ಬಿಟ್ಟು ಬ್ಯಾಟಿಂಗ್:ಮಳೆ ಅಡ್ಡಿಯಾದ್ದರಿಂದ ಡಕ್ವರ್ಥ್ ಲೂಯಿಸ್ ನಿಯಮದನ್ವಯ 171 ರನ್ ಗುರಿ ಪಡೆದ ಸಿಎಸ್ಕೆ ಬ್ಯಾಟರ್ಗಳು ಗೆಲುವೊಂದೇ ಗುರಿ ಎಂಬಂತೆ ಬ್ಯಾಟ್ ಬೀಸಿದರು. ಬೌಂಡರಿ, ಸಿಕ್ಸರ್ಗಳಿಂದಲೇ ರನ್ ಗಳಿಸಿದರು. ಕಾನ್ವೆ ಮತ್ತು ಗಾಯಕ್ವಾಡ್ ಮೊದಲ ವಿಕೆಟ್ಗೆ ಬಿರುಸಿನ 71 ರನ್ ಮಾಡಿದರು. ಗಾಯಕ್ವಾಡ್ 16 ಎಸೆತಗಳಲ್ಲಿ 26 ರನ್ ಮಾಡಿದರೆ, ಕಾನ್ವೆ 25 ಎಸೆತಗಳಲ್ಲಿ 47 ರನ್ ಚಚ್ಚಿದರು. ಇದಾದ ಬಳಿಕ ಶಿವಂ ದುಬೆ 32, ಅಜಿಂಕ್ಯಾ ರಹಾನೆ 27, ಅಂಬಟಿ ರಾಯುಡು 19, ವಿಜಯಪತಾಕೆ ಹಾರಿಸಿದ ರವೀಂದ್ರ ಜಡೇಜಾ 15 ರನ್ ಮಾಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಸಾಯಿ ಸುದರ್ಶನ್ ಶೋ:ಇದಕ್ಕೂ ಮೊದಲು ಗುಜರಾತ್ ಟೈಟಾನ್ಸ್ ತಂಡ ಐಪಿಎಲ್ ಇತಿಹಾಸದಲ್ಲೇ ಫೈನಲ್ ಪಂದ್ಯದಲ್ಲಿ ಗರಿಷ್ಠ ರನ್ ಮಾಡಿದ ತಂಡದ ಎಂಬ ದಾಖಲೆ ಬರೆಯಿತು. ಯುವ ಆಟಗಾರ ಸಾಯಿ ಸುದರ್ಶನ್ ಅವರ ಬಿರುಸಾದ ಬ್ಯಾಟಿಂಗ್ನಿಂದಾಗಿ 200 ರನ್ ಗಡಿ ದಾಟಿತು. 96 ರನ್ ಮಾಡಿದ ಸುದರ್ಶನ್ ಫೈನಲ್ ಪಂದ್ಯದ ಹೀರೋ ಆದರು. ಶತಕದ ಅಂಚಿನಲ್ಲಿ ಔಟಾದರೂ ಅವರ ಆಟ ತಂಡಕ್ಕೆ ಬಲ ನೀಡಿತು. ಇದಲ್ಲದೇ, ವೃದ್ಧಿಮಾನ್ ಸಾಹ 54, ಶುಭಮನ್ ಗಿಲ್ 39, ಹಾರ್ದಿಕ್ ಪಾಂಡ್ಯ 21 ರನ್ ಮಾಡಿದರು.
ಕೊನೆಯ ಓವರ್ ಥ್ರಿಲ್ಲರ್:ರೋಚಕವಾಗಿ ಸಾಗಿದ್ದ ಪಂದ್ಯದಲ್ಲಿ ಚೆನ್ನೈ ಗೆಲುವಿಗೆ ಕೊನೆಯ ಓವರ್ನಲ್ಲಿ 13 ರನ್ ಬೇಕಿತ್ತು. ರವೀಂದ್ರ ಜಡೇಜಾ, ಶಿವಂ ದುಬೆ ಕ್ರೀಸ್ನಲ್ಲಿದ್ದರು. ಮೋಹಿತ್ ಶರ್ಮಾಗೆ ಚೆಂಡು ನೀಡಿದ ನಾಯಕ ಹಾರ್ದಿಕ್ ಪಾಂಡ್ಯ, ಗೆಲುವಿನ ಭರವಸೆಯಲ್ಲಿದ್ದರು. ಮೊದಲ ಎಸೆತ ಡಾಟ್ ಆದರೆ, ಮುಂದಿನ ಮೂರು ಎಸೆತದಲ್ಲಿ ತಲಾ 1 ರನ್ ಮಾತ್ರ ಬಂದವು. ಇದು ತಂಡದ ಮೇಲೆ ಒತ್ತಡ ಹೆಚ್ಚಿಸಿತು. ಇನ್ನೇನು ಪಂದ್ಯ ಸೋತೆವು ಎನ್ನುವಷ್ಟರಲ್ಲಿ ಭಾರತದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಜಾದೂ ಮಾಡಿದಂತೆ 5 ಎಸೆತವನ್ನು ಸಿಕ್ಸರ್ ಬಾರಿಸಿದರೆ, ಕೊನೆಯ ಎಸೆತವನ್ನು ಬೌಂಡರಿ ಬಾರಿಸಿ ಮೈದಾನದ ತುಂಬಾ ಮೆರೆದಾಡಿದರು.
ಸಿಎಸ್ಕೆ ಅನುಭವ:ಮಹೇಂದ್ರ ಸಿಂಗ್ ದೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನೆಲ್ಲ ಅನುಭವವನ್ನು ಪಂದ್ಯದಲ್ಲಿ ಧಾರೆ ಎರೆಯಿತು. ಪಂದ್ಯಕ್ಕೂ ಮೊದಲೇ ನಿವೃತ್ತಿ ಘೋಷಿಸಿದ್ದ ಅಂಬಟಿ ರಾಯುಡು, ನಿವೃತ್ತಿ ಅಂಚಿನಲ್ಲಿರುವ ಧೋನಿ, ಮೊಯೀನ್ ಅಲಿ, ರವೀಂದ್ರ ಜಡೇಜಾ, ಅಜಿಂಕ್ಯಾ ರಹಾನೆ, ಡೆವೋನ್ ಕಾನ್ವೆಯಂತಹ ಹಿರಿಯ ಆಟಗಾರರು ಅಮೂಲ್ಯ ಕಾಣಿಕೆ ನೀಡುವ ಮೂಲಕ ಪಂದ್ಯ ಗೆದ್ದು ಪ್ರಶಸ್ತಿ ಜಯಿಸಿದರು.
ಧೋನಿ ಸಂಭ್ರಮ:ಮೈದಾನದಲ್ಲಿ ತುಂಬಾ ಸಾತ್ವಿಕತೆಯಿಂದ ನಡೆದುಕೊಳ್ಳುವ ಧೋನಿ ಮೊದಲ ಬಾರಿಗೆ ತಮ್ಮ ಎಮೋಷನ್ ಹೊರಹಾಕಿದರು. ಪಂದ್ಯದ ಕೊನೆಯಲ್ಲಿ ತಂಡ ಸೋಲಲಿದೆ ಎಂಬಂತಿದ್ದಾಗ ಕಣ್ಣು ಮುಚ್ಚಿಕೊಂಡು ಕೂತಿದ್ದರು. ಇದು ಕ್ಯಾಮರಾದಲ್ಲಿ ಪದೇ ಪದೇ ಸೆರೆಯಾಯಿತು. ಪವಾಡ ಎಂಬಂತೆ ಜಡೇಜಾ ಸಿಕ್ಸರ್, ಬೌಂಡರಿಗಳಿಂದ ಗೆಲುವು ತಂದ ಬಳಿಕ ಓಡಿ ಬಂದು ಜಡೇಜಾರನ್ನು ಎತ್ತಿಕೊಂಡು ಸಂಭ್ರಮಿಸಿದರು. ಧೋನಿ ಇದೇ ಮೊದಲ ಬಾರಿಗೆ ಗೆಲುವಿಗಾಗಿ ತಹತಹಿಸಿದರು.