ಬೆಂಗಳೂರು:ಡೆವೊನ್ ಕಾನ್ವೆ ಮತ್ತು ಶಿವಂ ದುಬೆ ಅವರ ಅಬ್ಬರದ ಅರ್ಧಶತಕದಾಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ ಓವರ್ಗಳ ಅಂತ್ಯಕ್ಕೆ 6 ವಿಕೆಟ್ ನಷ್ಟದಿಂದ 226 ರನ್ ಗಳಿಸಿತು. ಕಳೆದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿ ಉತ್ತಮ ಬೌಲಿಂಗ್ ನಿರ್ವಹಿಸಿದ್ದ ವಿಜಯ್ ಕುಮಾರ್ ವೈಶಾಕ್ ನಾಲ್ಕು ಓವರ್ನಲ್ಲಿ 62 ರನ್ ಬಿಟ್ಟು ಕೊಟ್ಟು ಒಂದು ವಿಕೆಟ್ ಪಡೆದು ದುಬಾರಿ ಬೌಲರ್ ಎನಿಸಿಕೊಂಡರು. ಆರ್ಸಿಬಿ ಗೆಲುವಿಗೆ 227 ರನ್ ಬೇಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಬಂದ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಆಘಾತ ಎದುರಿಸಿತು. 3 ರನ್ ಗಳಿಸಿದ ರುತುರಾಜ್ ಗಾಯಕ್ವಾಡ್ ಅವರನ್ನು ಸಿರಾಜ್ ಪೆವಿಲಿಯನ್ಗೆ ಅಟ್ಟಿದರು. ನಂತರ ಬಂದ ಅಜಿಂಕ್ಯ ರಹಾನೆ ಮತ್ತೊಬ್ಬ ಆರಂಭಿಕ ಡೆವೊನ್ ಕಾನ್ವೆ ಜೊತೆಗೂಡಿದರು. ಈ ಜೋಡಿ 74 ರನ್ ಜೊತೆಯಾಟ ನೀಡಿತು. ರಹಾನೆ ತಮ್ಮ ಫಾರ್ಮ್ ಮುಂದುವರೆಸಿದರು. 20 ಬಾಲ್ ಎದುರಿಸಿದ ಅವರು 3 ಬೌಂಡರಿ ಮತ್ತು ಎರಡು ಸಿಕ್ಸ್ನಿಂದ 37 ರನ್ ಕಲೆ ಹಾಕಿದರು.
ರಹಾನೆ ವಿಕೆಟ್ ಬಳಿಕ ಬಂದ ಶಿವಂ ದುಬೆ ಅಬ್ಬರದ ಬ್ಯಾಟಿಂಗ್ಗೆ ಮುಂದಾದರು. ಅತ್ತ ಆರಂಭಿಕ ಆಟಗಾರ ಕಾನ್ವೆ ಆರ್ಸಿಬಿ ಬೌಲರ್ಗಳನ್ನು ಸರಿಯಾಗಿ ದಂಡಿಸುತ್ತಿದ್ದರು. ಅವರ ಜೊತೆ ಸೇರಿದ ದುಬೆಯೂ ಸಹ ಚಿನ್ನಸ್ವಾಮಿ ಕ್ರೀಡಾಂಗಣದ ಮೂಲೆಮೂಲೆಗೆ ಚೆಂಡನ್ನಟ್ಟಿದರು. ಡೆವೊನ್ ಕಾನ್ವೆ 17 ರನ್ನಿಂದ ಶತಕ ವಂಚಿತರಾಗಿ ಪೆವಿಲಿಯನ್ಗೆ ಮರಳಿದರು. ಈ ಇನ್ನಿಂಗ್ಸ್ನಲ್ಲಿ ಕಾನ್ವೆ 45 ಬಾಲ್ ಎದುರಿಸಿ 6 ಬೌಂಡರಿ ಮತ್ತು ಸಿಕ್ಸ್ನಿಂದ 83 ರನ್ ಕಲೆ ಹಾಕಿದರು.
ಕಾನ್ವೆ ವಿಕೆಟ್ ನಂತರ ದುಬೆ ತಮ್ಮ ರನ್ ವೇಗ ಹೆಚ್ಚಿಸಿದರು. ಕೇವಲ 27 ಬಾಲ್ ಎದುರಿಸಿದ ಅವರು 5 ಸಿಕ್ಸ್ ಮತ್ತು 2 ಬೌಂಡರಿಯಿಂದ 52 ರನ್ ಕಲೆಹಾಕಿ ಔಟಾದರು. ರಾಯುಡು (14) ಮತ್ತು ಜಡೇಜಾ (10) ಕೊಡುಗೆ ನೀಡಿದರು. ಕೊನೆಯಲ್ಲಿ ಅಲಿ (19) ಮತ್ತು ಧೋನಿ (1) ಅಜೇಯರಾಗುಳಿದರು.