ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ವಾಲಿಫೈಯರ್ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಇದರ ಮಧ್ಯೆ ತಂಡದ ಪ್ರಮುಖ ವೇಗದ ಬೌಲರ್ ಎಂದು ಗುರುತಿಸಿಕೊಂಡಿದ್ದ ಮೊಹಮ್ಮದ್ ಸಿರಾಜ್ 15ನೇ ಆವೃತ್ತಿ ಐಪಿಎಲ್ನಲ್ಲಿ ಬರೋಬ್ಬರಿ 31 ಸಿಕ್ಸರ್ ಬಿಟ್ಟುಕೊಟ್ಟು ಕೆಟ್ಟದಾದ ರೆಕಾರ್ಡ್ಗೆ ಪಾತ್ರರಾಗಿದ್ದಾರೆ. ಇದರ ಜೊತೆಗೆ ಫ್ರಾಂಚೈಸಿ ನೀಡಿದ್ದ ಬರೋಬ್ಬರಿ 7 ಕೋಟಿ ರೂಪಾಯಿಗೆ ನ್ಯಾಯ ದೊರಕಿಸಿಕೊಟ್ಟಿಲ್ಲ ಎಂದು ಕ್ರೀಡಾಭಿಮಾನಿಗಳು ಮಾತನಾಡಿಕೊಳ್ಳಲು ಶುರು ಮಾಡಿದ್ದಾರೆ.
ಐಪಿಎಲ್ ಹರಾಜು ಪ್ರಕ್ರಿಯೆಲ್ಲಿ ಬರೋಬ್ಬರಿ 7 ಕೋಟಿ ರೂಪಾಯಿ ನೀಡಿ, ವೇಗದ ಬೌಲರ್ ಮೊಹಮ್ಮದ್ ಸಿರಾಜ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಿಟೈನ್ ಮಾಡಿಕೊಂಡಿತ್ತು. ಆದರೆ, 15ನೇ ಆವೃತ್ತಿ ಐಪಿಎಲ್ನಲ್ಲಿ ಸಿರಾಜ್ 15 ಪಂದ್ಯಗಳಿಂದ 10.07 ಎಕಾನಮಿಯಲ್ಲಿ ಬರೋಬ್ಬರಿ 514 ರನ್ ಬಿಟ್ಟುಕೊಟ್ಟಿದ್ದಾರೆ. ಜೊತೆಗೆ ಬರೋಬ್ಬರಿ 31 ಸಿಕ್ಸರ್ ಹೊಡೆಸಿಕೊಂಡಿದ್ದಾರೆ. ಈ ಆಟಗಾರನಿಗೆ ಆರ್ಸಿಬಿ ಬರೋಬ್ಬರಿ 7 ಕೋಟಿ ರೂಪಾಯಿ ಖರ್ಚು ಮಾಡಿದ್ದು, ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಮುಖ ಪಂದ್ಯದಲ್ಲಿ ಕೈಕೊಟ್ಟ ಸಿರಾಜ್:ಕ್ವಾಲಿಫೈಯರ್ 2 ಪಂದ್ಯದಲ್ಲೂ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಮೊಹಮ್ಮದ್ ಸಿರಾಜ್ ತಂಡದ ಸೋಲಿಗೆ ಪ್ರಮುಖ ಕಾರಣವಾದರು. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ತಾವು ಎಸೆದ ಎರಡು ಓವರ್ಗಳಲ್ಲಿ ಬರೋಬ್ಬರಿ 31 ರನ್ ಬಿಟ್ಟುಕೊಟ್ಟರು. ಆದರೆ, ಯಾವುದೇ ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ.