ಪುಣೆ:ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ಆರಂಭದಲ್ಲೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. 5ರನ್ಗಳಿಕೆ ಮಾಡಿದ್ದ ವೇಳೆ ವೃದ್ಧಿಮಾನ್ ಸಹಾ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಬಂದ ಮಾಥ್ಯೂ ವೇಡ್ ಕೂಡ 10ರನ್ಗಳಿಸಿ ಔಟಾದರು. ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಕೂಡ 11ರನ್ಗಳಿಕೆ ಮಾಡಿದ್ದ ವೇಳೆ ಆವೇಶ್ ಖಾನ್ ಓವರ್ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.
ಉತ್ತಮ ಜೊತೆಯಾಟವಾಡಿದ ಗಿಲ್- ಮಿಲ್ಲರ್ ಜೋಡಿ: ಎದುರಾಳಿ ತಂಡದ ಬೌಲರ್ಗಳ ಅತ್ಯುತ್ತಮ ಬೌಲಿಂಗ್ ದಾಳಿ ಹೊರತಾಗಿ ಕೂಡ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಹಾಗೂ ಮಿಲ್ಲರ್ ಉತ್ತಮ ಜೊತೆಯಾಟವಾಡಿದರು. ಮಿಲ್ಲರ್ 26ರನ್ಗಳಿಕೆ ಮಾಡಿದ್ರೆ, ಗಿಲ್ ಅಜೇಯ 63ರನ್ಗಳಿಸಿದರು. ಕೊನೆಯದಾಗಿ ಅಬ್ಬರಿಸಿದ ರಾಹುಲ್ ತೆವಾಟಿಯಾ ಕೇವಲ 16 ಎಸೆತಗಳಲ್ಲಿ ಅಜೇಯ 22ರನ್ಗಳಿಕೆ ಮಾಡಿ, ತಂಡದ ರನ್ ಹೆಚ್ಚಿಸುವಲ್ಲಿ ಯಶಸ್ವಿಯಾದರು. ತಂಡ ಕೊನೆಯದಾಗಿ 20 ಓವರ್ಗಳಲ್ಲಿ 4 ವಿಕೆಟ್ನಷ್ಟಕ್ಕೆ 144ರನ್ಗಳಿಕೆ ಮಾಡಿದೆ.
ಲಖನೌ ತಂಡದ ಪರ ಆವೇಶ್ ಖಾನ್ 2 ವಿಕೆಟ್ ಪಡೆದರೆ, ಮೋಸಿನ್ ಖಾನ್ ಹಾಗೂ ಹೋಲ್ಡರ್ ತಲಾ 1 ವಿಕೆಟ್ ಪಡೆದರು.
ಇಂಡಿಯನ್ ಪ್ರೀಮಿಯರ್ ಲೀಗ್ನ 57ನೇ ಪಂದ್ಯದಲ್ಲಿ ಬಲಿಷ್ಠ ಲಖನೌ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟನ್ಸ್ ಮುಖಾಮುಖಿಯಾಗಿವೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಷಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಹಾರ್ದಿಕ್ ಪಾಂಡ್ಯ ಬಳಗ ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ. ಉಭಯ ತಂಡಗಳಿಗೂ ಪ್ಲೇ-ಆಫ್ಗೆ ಪ್ರವೇಶ ಪಡೆದುಕೊಳ್ಳುವ ಸಲುವಾಗಿ ಈ ಪಂದ್ಯ ಮಹತ್ವ ಪಡೆದುಕೊಂಡಿದೆ.