ದುಬೈ:14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನ 39ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಹಿಂದಿನ ಎರಡೂ ಪಂದ್ಯಗಳನ್ನು ಸೋತಿರುವ ಉಭಯ ತಂಡಗಳು ಗೆಲುವಿನ ಲಯಕ್ಕೆ ಮರಳಲು ಸೆಣಸಾಡಲಿವೆ.
ಟೂರ್ನಿಯು ಸೆ. 19ರಂದು ಪುನಾರಂಭಗೊಂಡ ಬಳಿಕ ಎದುರಾದ ಎರಡು ಪಂದ್ಯಗಳಲ್ಲೂ ಕೂಡ ಆರ್‌ಸಿಬಿ ಹಾಗೂ ಮುಂಬೈ ಸೋಲು ಅನುಭವಿಸಿವೆ. ಹೀಗಾಗಿ ಗೆಲುವಿನ ಖಾತೆ ತೆರೆಯಲು ತುದಿಗಾಲಿನಲ್ಲಿ ನಿಂತಿವೆ. ಪ್ಲೇ-ಆಫ್ ದೃಷ್ಟಿಯಿಂದ ಎರಡೂ ತಂಡಗಳಿಗೆ ಇದು ಪ್ರಮುಖ ಪಂದ್ಯ ಎನಿಸಿದೆ.
ಕಳೆದ ಪಂದ್ಯದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಯುವ ಆಟಗಾರ ದೇವದತ್ತ ಪಡಿಕ್ಕಲ್ ಅರ್ಧಶತಕ ಬಾರಿಸಿ ಶತಕದ ಆರಂಭಿಕ ಜೊತೆಯಾಟವಾಡಿದ್ದರು. ಆದರೆ ಮಧ್ಯಮ ಹಾಗೂ ಕೆಳ ಕ್ರಮಾಂಕದಲ್ಲಿ ವೈಫಲ್ಯ ಅನುಭವಿಸಿದ ಬೆಂಗಳೂರು ಚೆನ್ನೈ ವಿರುದ್ಧ ದೊಡ್ಡ ಮೊತ್ತ ಗಳಿಸದೆ, ಬೌಲಿಂಗ್ನಲ್ಲಿ ವಿಫಲಗೊಂಡು ಸೋಲನುಭವಿಸಿತ್ತು. ಇನ್ನೊಂದೆಡೆ ಮುಂಬರುವ ಟಿ-20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾಗೆ ಆಯ್ಕೆಯಾಗಿರುವ 6 ಆಟಗಾರರು ಮುಂಬೈ ತಂಡದಲ್ಲಿದ್ದರೂ ಕೂಡ ಉತ್ತಮ ಲಯದಲ್ಲಿಲ್ಲ. ಗಾಯದಿಂದ ಹೊರಗುಳಿದಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಈ ಹಿಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಸತತ ಎರಡು ಸೋಲುಗಳು ರೋಹಿತ್ ಪಡೆಗೆ ಹಿನ್ನಡೆ ಉಂಟು ಮಾಡಿದೆ.
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಹಾಗೂ ಎರಡನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಎದುರು ಸೋತಿದೆ. ಹಾಗೆಯೇ ರಾಯಲ್ ಚಾಲೆಂಜರ್ಸ್ ಕೂಡ ಮೊದಲ ಪಂದ್ಯದಲ್ಲಿ ಕೆಕೆಆರ್ ಎದುರು ಹೀನಾಯ ಸೋಲು ಕಂಡರೆ, ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಖಭಂಗ ಅನುಭವಿಸಿದೆ.
ಅಂಕಪಟ್ಟಿಯಲ್ಲಿ ಆರ್‌ಸಿಬಿ 9 ಪಂದ್ಯಗಳಿಂದ 5 ಗೆಲುವುಗಳೊಂದಿಗೆ 3ನೇ ಸ್ಥಾನ ಹಾಗೂ ಮುಂಬೈ 9 ಪಂದ್ಯಗಳಲ್ಲಿ 4 ಜಯದೊಂದಿಗೆ 5ನೇ ಸ್ಥಾನದಲ್ಲಿವೆ. ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಉಳಿಸಿಕೊಳ್ಳಬೇಕಾದರೆ ಉಭಯ ತಂಡಗಳಿಗೆ ಮುಂಬರುವ ಪಂದ್ಯಗಳು ಪ್ರಾಮುಖ್ಯತೆ ಪಡೆದಿವೆ. ಐಪಿಎಲ್ ಟೂರ್ನಿಗಳಲ್ಲಿ ಇದುವರೆಗೆ ಎರಡೂ ತಂಡಗಳು ಒಟ್ಟು 28 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಮುಂಬೈ ಇಂಡಿಯನ್ಸ್ 17 ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು 11 ಬಾರಿ ಗೆಲುವು ಸಾಧಿಸಿದೆ.