ಮುಂಬೈ:15ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಗುಜರಾತ್ ಟೈಟನ್ಸ್ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟಕ್ಕೇರಿದೆ. ಈ ಸಲದ ಟೂರ್ನಿಯಲ್ಲಿ ಲೀಗ್ ಹಂತ, ಎಲಿಮಿನೇಟರ್, ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯಗಳು ಒಟ್ಟು ಆರು ಮೈದಾನದಲ್ಲಿ ನಡೆದಿದ್ದು, ಅದಕ್ಕಾಗಿ ಕ್ರೀಡಾಂಗಣದ ಸಿಬ್ಬಂದಿ, ಪಿಚ್ ಕ್ಯುರೇಟರ್ಗಳು ಹಗಲಿರುಳು ಶ್ರಮಿಸಿದ್ದಾರೆ.
ಐಪಿಎಲ್ ಟೂರ್ನಿ ಯಶಸ್ವಿಯಾಗಿ ನಡೆಯಲು ಶ್ರಮಿಸಿರುವ ಎಲ್ಲ ಮೈದಾನಗಳ ಪಿಚ್ ಕ್ಯುರೇಟರ್ ಹಾಗೂ ಕ್ರೀಡಾಂಗಣದ ಸಿಬ್ಬಂದಿಗಳಿಗೆ ಭಾರತೀಯ ಕ್ರಿಕೆಟ್ ಮಂಡಳಿ ಭರ್ಜರಿ ಗಿಫ್ಟ್ ಘೋಷಣೆ ಮಾಡಿದೆ. ಲೀಗ್ ಹಂತದ 70 ಪಂದ್ಯಗಳು ಹಾಗೂ ಪ್ಲೇ-ಆಫ್ನ ಪಂದ್ಯಗಳು ಆಯೋಜನೆಗೊಂಡಿದ್ದ ಮೈದಾನದ ಸಿಬ್ಬಂದಿಗೆ 25 ಲಕ್ಷ ರೂ. ಘೋಷಣೆ ಮಾಡಿದ್ದಾರೆ. ಬ್ರಬೋರ್ನ್, ವಾಂಖೆಡೆ, ಡಿವೈ ಪಾಟೀಲ್ ಮತ್ತು ಪುಣೆಯ ಎಂಸಿಎ ಕ್ರೀಡಾಂಗಣ ಈ ಸಾಲಿನಲ್ಲಿ ಸೇರಿಕೊಂಡಿವೆ. ಉಳಿದಂತೆ ಕೋಲ್ಕತ್ತಾದ ಈಡನ್ ಗಾರ್ಡನ್ ಮತ್ತು ನರೇಂದ್ರ ಮೋದಿ ಸ್ಟೇಡಿಯಂನ ಸಿಬ್ಬಂದಿಗೆ ತಲಾ 12.5 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ.