ಮುಂಬೈ (ಮಹಾರಾಷ್ಟ್ರ):ಅಂತಾರಾಷ್ಟ್ರೀಯ ಟಿ20 ಶ್ರೇಯಾಂಕದಲ್ಲಿ ಸೂರ್ಯಕುಮಾರ್ ಯಾದವ್ ವಿಶ್ವದ ನಂ. 1 ಬ್ಯಾಟರ್ ಸ್ಥಾನ ಏಕೆ ಹೊಂದಿದ್ದಾರೆ ಎಂಬುದನ್ನೂ ಮತ್ತೆ ಸಾಬೀತುಪಡಿಸಿದ್ದಾರೆ. ಟಿ20 ಮಾದರಿಯ ನಾಲ್ಕನೇ ಹಾಗೂ ಐಪಿಎಲ್ನ ಚೊಚ್ಚಲ ಶತಕ ದಾಖಲಿಸಿದ ಮುಂಬೈ ಬ್ಯಾಟರ್, ತಮ್ಮ 360 ಡಿಗ್ರಿ ಬ್ಯಾಟಿಂಗ್ ವೈಭವ ಮರೆದರು.
ಮುಂಬೈ ಇಂಡಿಯನ್ಸ್ಗೆ ಮಹತ್ತರವಾದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 49 ಎಸೆತದಲ್ಲಿ ಅಜೇಯ 103 ರನ್ ಗಳಿಸುವ ಮೂಲಕ ಗುಜರಾತ್ ಟೈಟಾನ್ಸ್ಗೆ ಬೃಹತ್ ಮೊತ್ತದ ಗುರಿ ನೀಡುವಲ್ಲಿ ನೆರವಾದರು. ಸೂರ್ಯ ಇನ್ನಿಂಗ್ಸ್ನಲ್ಲಿ 11 ಬೌಂಡರಿ ಮತ್ತು 6 ಸಿಕ್ಸರ್ ಸಿಡಿದವು. ಸಿಕ್ಸರ್ ಹಾಗೂ ಬೌಂಡರಿಗಳಿಂದಲೇ 80 ರನ್ ಕಲೆಹಾಕಿದ ಮುಂಬೈ ದಾಂಡಿಗ 23 ರನ್ಗಳನ್ನು ಓಡಿ ಗಳಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈಗೆ ಆರಂಭಿಕರಾಗಿ ರೋಹಿತ್ ಮತ್ತು ಕಿಶನ್ ಉತ್ತಮ ಆರಂಭ ಒದಗಿಸಿಕೊಟ್ಟರು. ಆದರೆ ನಂತರ ವಿಕೆಟ್ ನಿಲ್ಲಲಿಲ್ಲ. ಸೂರ್ಯ ಕುಮಾರ್ ಯಾದವ್ ಏಕಾಂಗಿಯಾಗಿ ಗುಜರಾತ್ ಬೌಲರ್ಗಳನ್ನು ಎದುರಿಸಿ ಭರ್ಜರಿ ಶತಕ ಬಾರಿಸಿದರು.
ಸೂರ್ಯ ಬ್ಯಾಟ್ನಿಂದ ಆರಂಭದಲ್ಲಿ 34 ಬಾಲ್ನಲ್ಲಿ ಮೊದಲ 53 ರನ್ ಬಂದಿತ್ತು. 16.6 ನೇ ಬಾಲ್ಗೆ ಟಿಮ್ ಡೇವಿಡ್ ಅವರ ವಿಕೆಟ್ ಬಿದ್ದಿತ್ತು ಇದು ಮುಂಬೈ ಇಂಡಿಯನ್ಸ್ನ ಐದನೇ ವಿಕೆಟ್. ಆಗ ತಂಡದ ಮೊತ್ತ 164 ಆಗಿತ್ತು. ನಂತರ ಗ್ರೀನ್ ಕ್ರೀಸ್ಗೆ ಬಂದಿದ್ದರು.
ಆದರೆ ಕೊನೆಯ ಮೂರು ಓವರ್ನ (18 ಬಾಲ್) 15 ಬಾಲ್ ಎದುರಿಸಿದ ಸೂರ್ಯ 50 ರನ್ ಗಳಿಸಿದ್ದರು. ಈ ನಡುವೆ ಗ್ರೀನ್ಗೆ 3 ಬಾಲ್ ಆಡಲು ಮಾತ್ರ ಸಿಕ್ಕಿತ್ತು. 18ನೇ ಓವರ್ ಮಾಡಿದ ಮೋಹಿತ್ ಶರ್ಮಾಗೆ 20 ರನ್, 19ನೇ ಓವರ್ ಮಾಡಿದ ಮಹಮ್ಮದ್ ಶಮಿ 17 ಬಿಟ್ಟುಕೊಟ್ಟರೆ, 20ನೇ ಅಲ್ಜಾರಿ ಜೋಸೆಫ್ ಓವರ್ನಲ್ಲಿ ಮತ್ತೆ 17 ರನ್ ಸೂರ್ಯ ಚಚ್ಚಿದ್ದರು. ಕೊನೆಯ 3 ಓವರ್ನಲ್ಲಿ 54 ರನ್ ಹರಿದು ಬಂದಿತ್ತು.
ಇದನ್ನೂ ಓದಿ:ಮುಂಬರುವ ಟಿ20 ವಿಶ್ವಕಪ್ಗೆ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಬೇಕು: ರವಿಶಾಸ್ತ್ರಿ
ವಿರಾಟ್ನಿಂದ ಮೆಚ್ಚುಗೆ:ಮುಂಬೈನಲ್ಲಿ ಅವರ ಬಿರುಸಿನ ಸೂರ್ಯ ಅವರ ಆಟ ಕಂಡ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅದ್ಭುತ ಪ್ರತಿಕ್ರಿಯೆಯನ್ನು ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ. ಅವರು ಸೆಲ್ಯೂಟ್ ಎಮೋಜಿಯನ್ನು ಸೇರಿಸುತ್ತಾ "ತುಲಾ ಮಾನ್ಲಾ ಭಾವು" ಎಂದು ಬರೆದಿದ್ದಾರೆ. ಇದು ಬಾಹುಬಲಿ ಸಿನಿಮಾದಲ್ಲಿ ವಿಲನ್ಗೆ ಹೊಸ ರೀತಿಯ ಭಾಷೆಯನ್ನು ರಾಜಮೌಳಿ ಬಳಸಿದಂತಿದೆ.
ಐಪಿಎಲ್ನಲ್ಲಿ ಸೂರ್ಯ:ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 135 ಪಂದ್ಯಗಳನ್ನು ಆಡಿರುವ ಸೂರ್ಯ ಕುಮಾರ್ ಯಾದವ್ 3,123 ರನ್ ಗಳಿಸಿದ್ದಾರೆ. 142.2 ಅವರ ಸ್ಟ್ರೈಕ್ ರೇಟ್ ಆಗಿದೆ. 31.55 ರ ಸರಾಸರಿಯಲ್ಲಿ ಅವರು ಐಪಿಎಲ್ನಲ್ಲಿ ರನ್ ಕಲೆಹಾಕುತ್ತಿದ್ದಾರೆ.
ಇದನ್ನೂ ಓದಿ:MI vs GT: ಸೂರ್ಯಕುಮಾರ್ ಅಬ್ಬರದ ಶತಕ.. ಗುಜರಾತ್ಗೆ 219 ರನ್ ಗೆಲುವಿನ ಗುರಿ