ನವದೆಹಲಿ :ಇಂಡಿಯನ್ ಪ್ರೀಮಿಯರ್ ಲೀಗ್ನ 2022ರ ಆವೃತ್ತಿಯ ಆಟಗಾರರ ಮೆಗಾ ಹರಾಜಿಗೆ ಒಟ್ಟು 590 ಆಟಗಾರರ ಅಂತಿಮ ಪಟ್ಟಿಯನ್ನು ಐಪಿಎಲ್ ಮಂಡಳಿ ಮಂಗಳವಾರ ಬಿಡುಗಡೆ ಮಾಡಿದೆ.
ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ವಿಶ್ವದ ದಿಗ್ಗಜ ಆಟಗಾರರು ಕಣಕ್ಕಿಳಿಯಲಿದ್ದಾರೆ. 2022ರ ಹರಾಜಿಗೆ ನೋಂದಣಿ ಮಾಡಿಕೊಂಡಿದ್ದ 1200ಕ್ಕೂ ಹೆಚ್ಚು ಆಟಗಾರರಲ್ಲಿ 590 ಆಟಗಾರರನ್ನು ಮಂಡಳಿ ಅಂತಿಮಗೊಳಿಸಿದೆ.
ಅದರಲ್ಲಿ 228 ಕ್ಯಾಪ್ಡ್ ಆಟಗಾರರು ಮತ್ತು 355 ಅನ್ಕ್ಯಾಪ್ಡ್ ಆಟಗಾರರು ಹಾಗೂ 7 ಅಸೋಸಿಯೇಟ್ ರಾಷ್ಟ್ರಗಳ ಕ್ರಿಕೆಟಿಗರು ಹರಾಜಿನಲ್ಲಿ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ.
ಶ್ರೇಯಸ್ ಅಯ್ಯರ್, ಶಿಖರ್ ಧವನ್, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಅಜಿಂಕ್ಯ ರಹಾನೆ, ಸುರೇಶ್ ರೈನಾ, ಯುಜ್ವೇಂದ್ರ ಚಹಲ್, ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಇಶಾಂತ್ ಶರ್ಮಾ ಸೇರಿದಂತೆ ಹಲವಾರು ಭಾರತೀಯ ತಾರೆಗಳು ಹರಾಜಿನಲ್ಲಿದ್ದಾರೆ.
ಫಾಫ್ ಡು ಪ್ಲೆಸಿಸ್, ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್, ಕಗಿಸೋ ರಬಾಡ, ಟ್ರೆಂಟ್ ಬೌಲ್ಟ್, ಕ್ವಿಂಟನ್ ಡಿ ಕಾಕ್, ಜಾನಿ ಬೈರ್ಸ್ಟೋವ್, ಜೇಸನ್ ಹೋಲ್ಡರ್, ಡ್ವೇನ್ ಬ್ರಾವೋ, ಶಕಿಬ್ ಅಲ್ ಹಸನ್, ಮಿಚೆಲ್ ಮಾರ್ಶ್ ಸೇರಿದಂತೆ ಹಲವು ವಿದೇಶಿ ಸ್ಟಾರ್ಗಳನ್ನು ಖರೀದಿಸಲು 2 ಹೊಸ ಫ್ರಾಂಚೈಸಿಗಳು ಸೇರಿದಂತೆ ಎಲ್ಲಾ 10 ಫ್ರಾಂಚೈಸಿಗಳು ಬಿಡ್ ಮಾಡಲಿವೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಬಿಡ್ನಲ್ಲಿ 48 ಆಟಗಾರರು 2 ಕೋಟಿ ರೂ.ಗಳನ್ನು ತಮ್ಮ ಮೂಲ ಬೆಲೆಯನ್ನಾಗಿ ಘೋಷಿಸಿಕೊಂಡಿದ್ದಾರೆ. 20 ಆಟಗಾರರು 1.15 ಕೋಟಿ ರೂ.ಗಳನ್ನು, 34 ಆಟಗಾರರು 1 ಕೋಟಿ ರೂಪಾಯಿಗಳನ್ನು ಮೂಲಬೆಲೆಯನ್ನಾಗಿ ಘೋಷಿಸಿಕೊಂಡಿದ್ದಾರೆ. 370 ಭಾರತೀಯ ಆಟಗಾರರು ಮತ್ತು 220 ವಿದೇಶಿ ಆಟಗಾರರು 2022ರ ಐಪಿಎಲ್ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 10 ತಂಡಗಳು ಖಾಲಿಯಿರುವ 217 ಸ್ಥಾನಗಳಿಗೆ ಬಿಡ್ ಮಾಡಲಿವೆ. ಆಟಗಾರರನ್ನು ಪ್ರತಿ ಫ್ರಾಂಚೈಸಿ ಗರಿಷ್ಠ 25 ಆಟಗಾರನ್ನು ಹೊಂದಲು ಅವಕಾಶವಿದೆ. ಹರಾಜಿನಲ್ಲಿ 70 ವಿದೇಶಿ ಆಟಗಾರರನ್ನು ಖರೀದಿಸಬಹುದಾಗಿದೆ.
ಹರಾಜಿನಲ್ಲಿರುವ ವಿದೇಶಿ ಆಟಗಾರರ ಸಂಖ್ಯಾವಾರು ಪಟ್ಟಿ
- ಆಫ್ಘಾನಿಸ್ತಾನ 17
- ಆಸ್ಟ್ರೇಲಿಯಾ 47
- ಬಾಂಗ್ಲಾದೇಶ 5
- ಇಂಗ್ಲೆಂಡ್ 24
- ನ್ಯೂಜಿಲ್ಯಾಂಡ್ 24
- ದಕ್ಷಿಣ ಆಫ್ರಿಕಾ 33
- ಶ್ರೀಲಂಕಾ 23
- ವೆಸ್ಟ್ ಇಂಡೀಸ್ 34
- ನೇಪಾಳ 1
- ಐರ್ಲೆಂಡ್ 5
- ಜಿಂಬಾಬ್ವೆ1
- ನಮೀಬಿಯಾ 3
- ಅಮೆರಿಕ 1
- ಸ್ಕಾಟ್ಲೆಂಡ್ 2
ಇದನ್ನೂ ಓದಿ:ಬರ್ಮಿಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ಗೆ ಕ್ರಿಕೆಟ್ ತಂಡಗಳ ಕನ್ಫರ್ನ್ : ಭಾರತ ಸೇರಿದಂತೆ 8 ದೇಶಗಳಿಂದ ಪೈಪೋಟಿ