ಬೆಂಗಳೂರು:2022 ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳಿರುವಾಗಲೇ ಗುಜರಾತ್ ಲಯನ್ಸ್ ತಂಡದಿಂದ ಹೊರಬಂದಿರುವ ಇಂಗ್ಲೆಂಡ್ನ ಆರಂಭಿಕ ಬ್ಯಾಟರ್ ಜೇಸನ್ ರಾಯ್ ಬದಲೀ ಆಟಗಾರನಾಗಿ ಅಫ್ಘಾನಿಸ್ತಾನದ ಯುವ ವಿಕೆಟ್ ಕೀಪರ್ ರೆಹ್ಮಾನುಲ್ಲಾ ಗುರ್ಬಜ್ ತಂಡ ಸೇರಲು ಸಜ್ಜಾಗಿದ್ದಾರೆ.
10 ತಂಡಗಳ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 26ರಿಂದ ಆರಂಭವಾಗಲಿದೆ. ಆದರೆ ಟೂರ್ನಿ ಆರಂಭಕ್ಕೂ ಮುನ್ನ ಜೇಸನ್ ರಾಯ್ ಬಯೋಬಬಲ್ ಆಯಾಸದ ಕಾರಣ ನೀಡಿ ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದರು. ಆರಂಭಿಕ ಸ್ಥಾನಕ್ಕೆ ರಾಯ್ರನ್ನು ನೆಚ್ಚಿಕೊಂಡಿದ್ದ ಗುಜರಾತ್ ಫ್ರಾಂಚೈಸಿ ಇದೀಗ ಅಫ್ಘಾನ್ ಯುವ ಪ್ರತಿಭೆಗೆ ಮಣೆ ಹಾಕಲು ನಿರ್ಧರಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
20 ವರ್ಷದ ಸ್ಫೋಟಕ ಬ್ಯಾಟರ್ 150+ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸಿರುವುದಲ್ಲದೆ, ಅದ್ಭುತ ವಿಕೆಟ್ ಕೀಪರ್ ಆಗಿಯೂ ತಂಡಕ್ಕೆ ನೆರವಾಗಬಲ್ಲರು. ರಾಷ್ಟ್ರೀಯ ತಂಡ ಖಾಯಂ ಬ್ಯಾಟರ್ ಆಗಿರುವ ಗುರ್ಬಜ್ ಅಫ್ಘಾನಿಸ್ತಾನ ತಂಡದ ಪರ 9 ಏಕದಿನ ಹಾಗೂ 12 ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 428 ಮತ್ತು 534 ರನ್ಗಳಿಸಿದ್ದಾರೆ. ಇನ್ನು ಟಿ20 ಕ್ರಿಕೆಟ್ನಲ್ಲಿ 69 ಪಂದ್ಯಗಳಿಂದ 10 ಅರ್ಧಶತಕ ಸಹಿತ 1620 ರನ್ ಸಿಡಿಸಿದ್ದಾರೆ.