ಮುಂಬೈ: 15ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಈ ಹಿಂದಿನ ಟೂರ್ನಿಗಿಂತಲೂ ವಿಭಿನ್ನವಾಗಿ ನಡೆಯಲಿದ್ದು, ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ ಇಂದು ಸಂಪೂರ್ಣ ವೇಳಾಪಟ್ಟಿ ಪ್ರಕಟಿಸಿದೆ. ವಿಶ್ವದ ಅತಿ ದೊಡ್ಡ ಶ್ರೀಮಂತ ಕ್ರಿಕೆಟ್ ಲೀಗ್ ಮಾರ್ಚ್ 26ರಿಂದ ಆರಂಭಗೊಳ್ಳಲಿದ್ದು, ಮೇ 29ರಂದು ಫೈನಲ್ ಪಂದ್ಯ ನಡೆಯುವುದರೊಂದಿಗೆ ಮುಕ್ತಾಯವಾಗಲಿದೆ.
ಈ ಸಲದ ಐಪಿಎಲ್ನಲ್ಲಿ ಒಟ್ಟು 10 ತಂಡಗಳು ಭಾಗಿಯಾಗಲಿದ್ದು, ಎಲ್ಲ ಪಂದ್ಯಗಳು ಭಾರತದಲ್ಲೇ ನಡೆಯಲಿವೆ. ಇದಕ್ಕಾಗಿ ಭಾರತೀಯ ಕ್ರಿಕೆಟ್ ಮಂಡಳಿ ಎಲ್ಲ ರೀತಿಯ ಸಿದ್ಧತೆ ನಡೆಸಿದೆ. ಈ ಸಲದ ಲೀಗ್ನ 70 ಪಂದ್ಯಗಳು ನಡೆಯವೆ. ಅದಕ್ಕಾಗಿ ಮುಂಬೈನ ವಾಂಖೆಡೆ ಸ್ಟೇಡಿಯಂ, ಡಿವೈ ಪಾಟೀಲ್ ಮತ್ತು ಬ್ರಬೋರ್ನ್ ಮೈದಾನ ಹಾಗೂ ಪುಣೆಯ ಮೈದಾನ ಸಿದ್ಧಗೊಂಡಿವೆ. ಎಲ್ಲ ತಂಡಗಳು ವಾಂಖೆಡೆ ಮತ್ತು ಡಿವೈ ಪಾಟೀಲ್ನಲ್ಲಿ ತಲಾ 4 ಪಂದ್ಯಗಳು ಆಡಲಿದ್ದು, ಪುಣೆ ಮತ್ತು ಬ್ರಬೋರ್ನ್ನಲ್ಲಿ ತಲಾ 3 ಪಂದ್ಯ ಆಡಲಿವೆ. ಉಳಿದ ಪಂದ್ಯಗಳು ಮುಂಬೈನಲ್ಲಿ ನಡೆಯಲಿವೆ.
ಎಲ್ಲ 10 ತಂಡಗಳು ತಲಾ 14 ಪಂದ್ಯಗಳನ್ನಾಡಲಿದ್ದು, ಈ ಪೈಕಿ ಏಳು ತವರು ಮೈದಾನ ಹಾಗೂ ಏಳು ಮತ್ತೊಂದು ಮೈದಾನದಲ್ಲಿ ಆಡಲಿವೆ. ಪ್ರತಿ ತಂಡ ಐದು ತಂಡಗಳ ವಿರುದ್ಧ ಎರಡು ಪಂದ್ಯ ಆಡಲಿದ್ದು, ಉಳಿದ ನಾಲ್ಕು ತಂಡಗಳ ವಿರುದ್ಧ ಕೇವಲ ಒಂದು ಪಂದ್ಯ ಆಡಲಿದೆ. ಲೀಗ್ ಸುತ್ತಿನ ನಂತರ, ನಾಲ್ಕು ಪ್ಲೇಆಫ್ ಪಂದ್ಯ ನಡೆಯಲಿದ್ದು, ಅದಕ್ಕಾಗಿ ಸ್ಥಳ ಮತ್ತು ದಿನಾಂಕ ನಿಗದಿಗೊಂಡಿಲ್ಲ.