ಶಾರ್ಜಾ:ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ 23ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
ಸತತ ಎರಡು ಗೆಲುವಿನ ಮೂಲಕ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿದ್ದ ಸ್ಟೀವ್ ಸ್ಮಿತ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡ ಕಳೆದ ಮೂರು ಪಂದ್ಯಗಳನ್ನು ಕೈಚೆಲ್ಲಿ ನಿರಾಸೆ ಅನುಭವಿಸಿದೆ. ಇತ್ತ ಶ್ರೇಯಸ್ ಐಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿದ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಜಯ ಗಳಿಸಿದ್ದು, ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ.
ಸ್ಫೋಟಕ ಆಟಗಾರರಿಂದ ತುಂಬಿರುವ ರಾಜಸ್ಥಾನ ತಂಡಕ್ಕೆ ಅಗ್ರ ಕ್ರಮಾಂಕದ ಆಟಗಾರರು ವೈಫಲ್ಯ ಅನುಭವಿಸುತ್ತಿರುವುದು ದೊಡ್ಡ ತಲೆನೋವಾಗಿದೆ. ಸತತವಾಗಿ ಸೋತಿರುವ ಮೂರು ಪಂದ್ಯಗಳಲ್ಲೂ ಅಗ್ರ ಕ್ರಮಾಂಕದ ಆಟಗಾರರ ವೈಫಲ್ಯ ಮುಖ್ಯ ಕಾರಣವಾಗಿದೆ. ಆರಂಭದ ಪಂದ್ಯಗಳಲ್ಲಿ ಅಬ್ಬರಿಸಿದ್ದ ಸಂಜು ಸಾಮ್ಸನ್ ಕಳೆದ ಮೂರು ಪಂದ್ಯಗಳಲ್ಲಿ ಸದ್ದು ಮಾಡಲಿಲ್ಲ. ನಾಯಕ ಸ್ಟೀವ್ ಸ್ಮಿತ್ ಕೂಡ ಬೇಗ ಪೆವಿಲಿಯನ್ ಸೇರಿಕೊಳ್ಳುತ್ತಿದ್ದಾರೆ. ಯುವ ಆಟಗಾರ ಯಶಸ್ವಿ ಜೈಸ್ವಾಲ್ ನೀಡಿದ ಅವಕಾಶಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳುತ್ತಿಲ್ಲ.
ಇಂಗ್ಲೆಂಡ್ ಆಟಗಾರ ಬಟ್ಲರ್ ಅದ್ಭುತ ಫಾರ್ಮ್ನಲ್ಲಿರುವುದು ರಾಯಲ್ಸ್ನ ಪ್ಲಸ್ ಪಾಯಿಂಟ್ ಆಗಿದೆ. ರಾಹುಲ್ ತೆವಾಟಿಯ ಸಮಯಕ್ಕೆ ಸರಿಯಾಗಿ ಮಿಂಚಬಲ್ಲರು. ಬೌಲಿಂಗ್ನಲ್ಲಿ ಜೋಫ್ರಾ ಆರ್ಚರ್, ಟಾಮ್ ಕರ್ರನ್, ರಾಹುಲ್ ತೆವಾಟಿಯಾ ಉತ್ತಮ ಪ್ರದರ್ಶನ ತೋರಿದ್ದಾರೆ. ಯುವ ವೇಗಿ ಕಾರ್ತಿಕ್ ತ್ಯಾಗಿ ಕೂಡ ಮುಂಬೈ ವಿರುದ್ಧ ಡೀಸೆಂಟ್ ಸ್ಪೆಲ್ ಮಾಡಿ ಗಮನ ಸೆಳೆದಿದ್ದರು.
ಇತ್ತ ಶ್ರೇಯಸ್ ಐಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಇಲ್ಲಿಯವರೆಗೆ ಅದ್ಭುತ ಪ್ರದರ್ಶನ ನೀಡಿದೆ. ಡೆಲ್ಲಿ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ಶಿಖರ್ ಧವನ್, ರಿಷಭ್ ಪಂತ್ ಅಮೊಘ ಪ್ರದರ್ಶನ ನೀಡುತ್ತಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೋಯ್ನಿಸ್ ಮತ್ತು ಹೆಟ್ಮೆಯರ್ ಸಮಯ ಬಂದಾಗ ಸಿಡಿಯುವ ಸಾಮರ್ಥ್ಯ ಹೊಂದಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲೂ ಕ್ಯಾಪಿಟಲ್ಸ್ ಮೇಲುಗೈ ಹೊಂದಿದೆ. ಕಗಿಸೊ ರಬಾಡ, ಎನ್ರಿಚ್ ನೋರ್ಟ್ಜೆ, ಹರ್ಷಲ್ ಪಟೇಲ್ ಮತ್ತು ಸ್ಪಿನ್ನರ್ ಆರ್.ಅಶ್ವಿನ್ ಉತ್ತಮ ಲಯದಲ್ಲಿದ್ದು, ಎದುರಾಳಿ ತಂಡವನ್ನು ಕಟ್ಟಿಹಾಕುವ ಸಾಮರ್ಥ್ಯವಿದೆ.
ರಾಜಸ್ಥಾನ - ಡೆಲ್ಲಿ ಮುಖಾಮುಖಿ ಇಲ್ಲಿಯವರೆಗೆ ಉಭಯ ತಂಡಗಳು 20 ಬಾರಿ ಮುಖಾಮುಖಿಯಾಗಿದ್ದು, ರಾಜಸ್ಥಾನ ರಾಯಲ್ಸ್ ತಂಡ 11 ಪಂದ್ಯದಲ್ಲಿ ಜಯ ಗಳಿಸಿದ್ರೆ, ಡೆಲ್ಲಿ ತಂಡ 9 ಪಂದ್ಯಗಳನ್ನು ಗೆದ್ದಿದ್ದು ಹಿನ್ನಡೆ ಅನುಭವಿಸಿದೆ.