ಜೈಪುರ:ತವರಿನ ಅಂಗಳದಲ್ಲೇ ರಾಜಸ್ಥಾನ್ ರಾಯಲ್ಸ್ ನೀಡಿದ ಬೃಹತ್ ಮೊತ್ತದ ಹೊರತಾಗಿಯೂ, ಡೆಲ್ಲಿ ಬಾಯ್ಸ್ ಆರ್ಆರ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಇಲ್ಲಿನ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ನೀಡಿದ 191 ರನ್ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ಗಳ ಭರ್ಜರಿ ಜಯ ಗಳಿಸಿತು.
ರಹಾನೆ ಶತಕ ವ್ಯರ್ಥ...
ಟಾಸ್ ಸೋತು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್ ಆಟಗಾರರು ಆರಂಭದಿಂದಲೇ ಭರ್ಜರಿ ಬ್ಯಾಟಿಂಗ್ ನಡೆಸಿದರು. ಆರಂಭದಲ್ಲೇ ಸಂಜು ಸ್ಯಾಮ್ಸನ್ ಶೂನ್ಯ ಸಂಪಾದಿಸಿ ರನ್ ಔಟ್ ಆದರು. ಬಳಿಕ ನಾಯಕ ಸ್ಮಿತ್ ಜೊತೆ ಸೇರಿದ ಆರಂಭಿಕ ಆಟಗಾರ ಅಜಿಂಕ್ಯಾ ರಹಾನೆ, ಭರ್ಜರಿ ಶತಕ ಸಿಡಿಸಿ ತಂಡದ ಮೊತ್ತ ಹೆಚ್ಚಿಸಿದರು. 63 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 11 ಬೌಂಡರಿಗಳ ನೆರವಿನಿಂದ ಒಟ್ಟು 105 ರನ್ ಚಚ್ಚಿದ ರಹಾನೆ ಅಜೇಯರಾಗಿ ಉಳಿದರು. ಬಳಿಕ ಸ್ಮಿತ್ ಅರ್ಧಶತಕ ಸಿಡಿಸಿ ಅಕ್ಸರ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಆಟಗಾರರು ಹೆಚ್ಚು ರನ್ ಕಲೆಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ 6 ವಿಕೆಟ್ ಕಳೆದುಕೊಂಡು 191 ರನ್ ಗಳಿಸಿತು.
ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭ ಪಡೆಯಿತು. ಶಿಖರ್ ಧವನ್ ಅರ್ಧಶತಕ ಸಿಡಿಸಿ ಔಟಾದರೆ, ನಾಯಕ ಶ್ರೇಯಸ್ ಅಯ್ಯರ್ 4 ರನ್ಗಳಿಸಿ ನಿರ್ಗಮಿಸಿ ನಿರಾಸೆ ಮೂಡಿಸಿದರು. ಬಳಿಕ ಜೊತೆಯಾದ ಪ್ರಥ್ವಿ ಶಾ ಹಾಗೂ ರಿಶಬ್ ಪಂತ್ ಜವಾಬ್ದಾರಿಯುತ ಆಟವಾಡಿದರು. ಶಾ 42 ರನ್ ಗಳಿಸಿ ಔಟಾದರೆ, ಪಂತ್ 78 ರನ್ ಗಳಿಸುವ ಮೂಲಕ ವಿಜಯದ ರನ್ ಬಾರಿಸಿ ತಂಡಕ್ಕೆ ಗೆಲುವಿನ ಕಾಣಿಕೆ ಕೊಟ್ಟರು. ಈ ಮೂಲಕ ಡೆಲ್ಲಿ 6 ವಿಕೆಟ್ಗಳಿಂದ ರಾಜಸ್ಥಾನ್ ಮಣಿಸಿ ವಿಜಯದ ನಗೆ ಬೀರಿತು.